Advertisement

ಅಭಿವೃದ್ಧಿ ಯೋಜನೆಗಳ ಮೂಲಕ ಕಾಂಗ್ರೆಸ್ ಷಡ್ಯಂತ್ರಕ್ಕೆ ತಕ್ಕ ಉತ್ತರ ನೀಡಬೇಕಿದೆ : ಸಿಎಂ

07:52 PM Dec 19, 2020 | sudhir |

ಬೆಂಗಳೂರು: ರೈತರ ಪ್ರತಿಭಟನೆ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ, ಪಕ್ಷದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಅಭಿವೃದ್ಧಿ ಯೋಜನೆಗಳ ಕುರಿತು ತಿಳಿಸುವ ಮೂಲಕ ಈ ಷಡ್ಯಂತ್ರಕ್ಕೆ ತಕ್ಕ ಉತ್ತರ ನೀಡಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

Advertisement

ಕೋರಮಂಗಲದಲ್ಲಿ ನಡೆದ “ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ”ಯಲ್ಲಿ ಮಾತನಾಡಿದ ಅವರು ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಸತ್ಯಾಗ್ರಹ ನಡೆಸುತ್ತಿರುವವರು ಪ್ರಧಾನಿಯವರು ಕೈಮುಗಿದು ಕೇಳಿದರೂ ಮಾತುಕತೆಗೆ ಬರುತ್ತಿಲ್ಲ, ಇದರ ಹಿಂದೆ ಕಾಂಗ್ರೆಸ್ ಪಕ್ಷದ ಪಿತೂರಿ ಇರುವುದೇ ಪ್ರತಿಭಟನೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವವೇ ಇಲ್ಲ. ಅಧಿಕಾರ ಇಲ್ಲದ ಕಾರಣ ಕಾಂಗ್ರೆಸ್ಸಿಗರು ರೈತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ದೇಶದ ಅತಿಹೆಚ್ಚು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ರೈತರ ಉತ್ಪನ್ನಗಳ ಇಳುವರಿ ಹೆಚ್ಚಳ ಹಾಗೂ ಆದಾಯ ದುಪ್ಪಟ್ಟು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯುಪಯುಕ್ತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ:ರೈತರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಅಶೋಕ್ ಆಕ್ರೋಶ

Advertisement

ನಮ್ಮದು ರೈತಪರ ಸರಕಾರ. ಕೃಷಿ, ಆರೋಗ್ಯ ಹಾಗೂ ಶಿಕ್ಷಣ ನಮ್ಮ ಆದ್ಯತೆಯಾಗಿದೆ. ಕೃಷಿಯನ್ನು ಲಾಭದಾಯಕ ಉದ್ದಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಸರಕಾರ ಗರಿಷ್ಠ ಪ್ರಯತ್ನ ಮಾಡುತ್ತಿದೆ ಎಂದು ಅವರು ವಿವರಿಸಿದರು.

ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಕಾಯ್ದೆಯನ್ನು ಕೇಂದ್ರ ಸರಕಾರ ಅನುಷ್ಠಾನಕ್ಕೆ ತಂದಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಸರಕಾರವು ರೈತರಿಗೆ 6 ಸಾವಿರ ರೂಪಾಯಿ ನೀಡುತ್ತಿದ್ದು, ರಾಜ್ಯ ಸರಕಾರವು ಇದಕ್ಕೆ ಇನ್ನೂ 4 ಸಾವಿರ ರೂಪಾಯಿ ಸೇರಿಸಿ ಕೊಡುತ್ತಿದೆ. ಆರ್ಥಿಕ ಸಂಕಷ್ಟ ಇದ್ದರೂ ರೈತರಿಗೆ ನೆರವಾಗುವ ವಿಚಾರದಲ್ಲಿ ಸರಕಾರ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ರೈತರ ಉತ್ಪನ್ನ ಖರೀದಿಗೆ ಮೋದಿ ಸರಕಾರವು ಆರು ವರ್ಷಗಳಲ್ಲಿ 8 ಲಕ್ಷ ಕೋಟಿ ರೂಪಾಯಿ ವ್ಯಯಸಿದೆ. ಆದರೆ, ಯುಪಿಎ ಸರಕಾರವು 10 ವರ್ಷಗಳಲ್ಲಿ 3.5 ಲಕ್ಷ ಕೋಟಿ ರೂಪಾಯಿಯನ್ನಷ್ಟೇ ಈ ಉದ್ದೇಶಕ್ಕೆ ಬಳಸಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next