ಶಿವಮೊಗ್ಗ: ಕೊರೊನಾ ಪಾಸಿಟಿವಿಟಿ ರೇಟ್ ಕನಿಷ್ಠ ಶೇ.5ಕ್ಕೆ ಬರಬೇಕು ಎಂಬುದು ನಮ್ಮ ಅಪೇಕ್ಷೆ. ಹೀಗಾಗಿಯೇ ಎಲ್ಲಿ ಸೋಂಕು ಹೆಚ್ಚಿದೆಯೋ ಅಲ್ಲಿ ಲಾಕ್‌ಡೌನ್ ಮುಂದುವರಿಸಲಾಗಿದೆ. ಅನಿವಾರ್ಯವಾದರೆ ಶೀಘ್ರವೇ ಮತ್ತೊಂದು ಪ್ಯಾಕೇಜ್ ಘೋಷಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ, ಶಿಕಾರಿಪುರ ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಿನ ಪ್ರಮಾಣದಲ್ಲಿದೆ. ಅದನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಲು ಅ ಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಲಾಕ್‌ಡೌನ್ ಇನ್ನೂ ಒಂದು ವಾರ ವಿಸ್ತರಿಸಿರುವುದರಿಂದ ಸೋಂಕು ಹತೋಟಿಗೆ ಬರುವ ವಿಶ್ವಾಸ ಇದೆ ಎಂದರು.
ಇನ್ನೊಂದು ವಾರದಲ್ಲಿ ಪಾಸಿಟಿವಿಟಿ ರೇಟ್ ಶೇ.5ಕ್ಕೆ ಬರುತ್ತದೆ ಎಂಬ ವಿಶ್ವಾಸ ಇದೆ. ಆದರೆ ಇದಕ್ಕೆ ಜನ ಸಹಕಾರ ಕೊಡಬೇಕು. ಕಳೆದ ಎಂಟು ತಿಂಗಳಿಂದ ಆದಾಯ ಕುಸಿತವಾಗಿದೆ. ತೆರಿಗೆ ಸಂಗ್ರಹ ಕಡಿಮೆ ಆಗಿದೆ. ಇದರ ನಡುವೆಯೂ ಅಭಿವೃದ್ಧಿ ಕಾರ್ಯಕ್ಕೆ, ನೀರಾವರಿ ಯೋಜನೆಗೆ ಹಣಕಾಸಿನ ಕೊರತೆ ಆಗದಂತೆ ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ. ಹೆಚ್ಚಿನ ಹಣಕಾಸು ನೆರವು ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಾಲ್ಕು ತಿಂಗಳು ಕಳೆದರೆ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಈಗಾಗಲೇ ಬಡವರಿಗೆ ತಲುಪುವಂತಹ ಎರಡು ಪ್ಯಾಕೇಜ್ ನೀಡಲಾಗಿದೆ. ಮುಂದೆ ಅನಿವಾರ್ಯವಾದರೆ ಮತ್ತೂಂದು ಪ್ಯಾಕೇಜ್ ಘೋಷಿಸಲಾಗುವುದು ಎಂದರು. ಒಂದೆರಡು ದಿನದಲ್ಲಿ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ಬರಲಿದೆ. ಎಲ್ಲಾ ಜಿಲ್ಲೆಗೂ ಜನಸಂಖ್ಯೆಗೆ ಅನುಗುಣವಾಗಿ ವ್ಯಾಕ್ಸಿನ್ ಸಿಗಲಿದೆ ಎಂದರು.
ಇದನ್ನೂ ಓದಿ :ಗೋವಾ : ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೇಸ್ ಪ್ರತಿಭಟನೆ
18ರ ನಂತರ ಅರುಣ್ ಸಿಂಗ್ ಭೇಟಿ
ಜೂ.17, 18ರ ನಂತರ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬರಲಿದ್ದಾರೆ. ಎರಡು ದಿನ ಕರ್ನಾಟಕದಲ್ಲೇ ಇದ್ದು ಒಂದೆರಡು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅರುಣ್ ಸಿಂಗ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದರು.