ಹುಬ್ಬಳ್ಳಿ: ಲೋಕಸಭಾ ಅಧ್ಯಕ್ಷ ಓಂ ಪ್ರಕಾಶ್ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ಸಚಿವರು ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇನ್ನಿತರ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು.
ಗೃಹ ಸಚಿವ ಅಮಿತ್ ಶಾ ಅವರಿಗೆ ಶಾಲು ಹೊದಿಸಿ, ಹಾರ ತೊಡಿಸಿದ ಮುಖ್ಯಮಂತ್ರಿಗಳು ಲೇಖಕ ದೀಪಕ್ ಚೋಪ್ರಾ ಬರೆದಿರುವ “ಬುದ್ಧ- ದ ಸ್ಟೋರಿ ಆಫ್ ಎನಲೈಟ್ಮೆಂಟ್” ಪುಸ್ತಕವನ್ನು ನೀಡಿದರು. ನಂತರ ಗೃಹ ಸಚಿವರೊಂದಿಗೆ ವಿಶೇಷ ಹೆಲಿಕಾಪ್ಟರ್ ಮೂಲಕ ದಾವಣಗೆರೆ ನಗರದಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು.
ಇದನ್ನೂ ಓದಿ:ಗಣಿಗಾರಿಕೆಯಿಂದ ನಂದಿಗಿರಿಧಾಮಕ್ಕೆ ಧಕ್ಕೆ: ಪರಿಸರ ಪ್ರೇಮಿಗಳ ಆತಂಕ
ಲೋಕಸಭಾಧ್ಯಕ್ಷರು, ಕೇಂದ್ರ ಗೃಹ ಸಚಿವರು ಹಾಗೂ ಇತರೆ ಸಚಿವರು ಸಂಜೆ ಹುಬ್ಬಳ್ಳಿ ಡೆನ್ನಿಸನ್ ಹೋಟೆಲ್ ನಲ್ಲಿ ಆಯೋಜಿಸಲಾಗಿರುವ ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿಯವರ ಪುತ್ರಿ ಅರ್ಪಿತಾ ಅವರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪಿಯೂಷ್ ಗೋಯೆಲ್, ಕೇಂದ್ರ ಶಿಕ್ಷಣ ಸಚಿವ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ರಾಜ್ಯ ರೈಲ್ವೇ ಖಾತೆ ಸಚಿವ ರಾವ್ ಸಾಹೇಬ್ ಪಾಟೀಲ್ ದವನೆ, ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ಆಯುಕ್ತ ಲಾಬೂರಾಮ್ ಮತ್ತಿತರರು ಉಪಸ್ಥಿತರಿದ್ದರು.