Advertisement
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ರಾತ್ರಿ 10-30 ರ ಸುಮಾರಿಗೆ ನಗರದ ಜ್ಞಾನಯೋಗಾಶ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವ ಜೋಶಿ ಶ್ರೀಗಳ ದರ್ಶನ ಪಡೆದರು.
Related Articles
Advertisement
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರೆ ಮಾಡಿದಾಗ ಪ್ರಧಾನಿ ಮೋದಿ ಅವರು ಶ್ರೀಗಳಿಗೆ ನಮಿಸುವ ಮೂಲಕ ಮಾತು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಶ್ರೀಗಳು ಸಹ ಎರಡು ಶಬ್ದ ಮಾತನಾಡಿ ಕೈ ಸನ್ನೆಯ ಮೂಲಕ ನಮಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೋದಿ ಅವರು ವಿನಂತಿಸಿದಾಗ, ಶ್ರೀಗಳು ಕೈ ಮುಗಿದು ಪ್ರಧಾನಿಗಳಿಗೆ ಧನ್ಯವಾದ ಅರ್ಪಿಸಿದರು ಎಂದು ಮುಖ್ಯಮಂತ್ರಿ ಬೊಮ್ಮಾಯಿ ವಿವರಿಸಿದರು.
ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ಕ್ಷಣ ಕ್ಷಣ ಮಾಹಿತಿ ಪಡೆಯುತ್ತಿದ್ದೇನೆ. ಶ್ರೀಗಳೊಂದಿಗೆ ಎರಡು ದಿನಗಳ ಹಿಂದೆ ಮೊಬೈಲ್ ಮೂಲಕ ಮಾತನಾಡಿದಾಗ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.
ಮೋದಿ ಅವರು ಮಾತನಾಡಲು ಬಯಸಿದ್ದು ಮಧ್ಯಾಹ್ನ ಫೋನ್ ಮಾಡಿದ್ದರು ಈಗ ಪ್ರಧಾನಿ ಅವರ ಕರೆ ಮಾಡಿದಾಗ ಮಾತನಾಡಿ, ಕೈ ಮುಗಿದು ಧನ್ಯವಾದ ತಿಳಿಸಿದ್ದರು. ಪ್ರಧಾನಿ ಮೋದಿ ಅವರು ಕೂಡ ನೀವು ಶೀಘ್ರವೇ ಗುಣಮುಖ ಆಗಲಿದ್ದೀರಿ ಎಂದು ಆಶಯ ವ್ಯಕ್ತಪಡಿಸಿದರು ಎಂದರು.
ಶ್ರೀಗಳ ಹೃದಯ ಬಡಿತ, ರಕ್ತದೋತ್ತಡ, ಮೂತ್ರಕೋಶ ಸೇರಿದಂತೆ ಎಲ್ಲ ಅಂಗಾಂಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಶ್ರೀಗಳು ಆಹಾರ ಸೇವನೆ ನಿರಾಕರಿಸಿದ್ದು, ಔಷಧಿ ಪಡೆಯುವುದಕ್ಕೂ ಒಪ್ಪುತ್ತಿಲ್ಲ. ಹೀಗಾಗಿ ಶ್ರೀಗಳ ಆರೋಗ್ಯ ಕ್ಷೀಣಿಸುತ್ತಿದೆ ಎಂದರು.
ಶ್ರೀಗಳ ಬದುಕೇ ಸಮಾಜಕ್ಕೆ ಮಾದರಿ, ಆದರ್ಶ, ದಾರಿದೀಪ. ಆಧುನಿಕ ಕಾಲದಲ್ಲಿ ನೈಜವಾದ ವೈರಾಗ್ಯ ನೋಡುವ ಸೌಭಾಗ್ಯ ಅವರಿಂದ ನಮಗೆ ದೊರಕಿದೆ. ಅವರ ಮಾತು, ಭೋದನೆ ನಮಗೆ ದಾರಿದೀಪ, ಮಾರ್ಗದರ್ಶಿ, ಇಡೀ ಕರ್ನಾಟಕದಲ್ಲೇ ಮನಃಪರಿವರ್ತನೆ ಮಾಡುವ ಏಕೈಕ ಶಕ್ತಿ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಲ್ಲಿದೆ ಎಂದು.
ಪರಿಶುದ್ದ ಆತ್ಮ, ಪರಿಶುದ್ಧ ಚಿಂತನೆ, ಪರಿಶುದ್ದ ಆಚರಣೆ ಹೊಂದಿರುವ ಶ್ರೀಗಳು ಅಪರೂಪದ ತತ್ವಜ್ಞಾನಿ. ದೇಶ, ವಿದೇಶಗಳ ಆಳವಾದ ಜ್ಞಾನ ಹೊಂದಿರುವ ಶ್ರೀಗಳು, ಬದುಕಿನ ಸೂಕ್ಷ್ಮತೆಯನ್ನು ಅತ್ಯಂತ ನಿಖರವಾಗಿ ಅರ್ಥೈಸಿ, ಜಟಿಲ ಸಮಸ್ಯೆಗಳಿಗೆ ಸರಳ ಪರಿಹಾರ ಕಲ್ಪಿಸಿದವರು ಎಂದು ಬಣ್ಣಿಸಿದರು.
ಶ್ರೀ ಸಿದ್ದೇಶ್ವರ ಗುರುಗಳು, ಬದುಕು ಬದುಕಲು ಹೊಸ ಆಯಾಮ ಕಲ್ಪಿಸಿದ್ದಾರೆ. ನನ್ನ ಜೊತೆ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ, ರೈತಾಪಿ ಜನತೆ, ನೀರಾವರಿ, ತತ್ವಜ್ಞಾನ, ಆಧ್ಯಾತ್ಮ ಹೀಗೆ ಎರಡೂ ಮೂರು ತಾಸು ಚರ್ಚೆ ಮಾಡಿದ್ದೇವೆ ಎಂದರು.
ಸಿದ್ದೇಶ್ವರ ಶ್ರೀಗಳ ಆಶೀರ್ವಾದ ಸದಾ ನನ್ನ ಮೇಲಿದೆ. ನನ್ನ ಕ್ಷೇತ್ರದ ಶಿಶುನಾಳ ಶರೀಫರ ಜನ್ಮಭೂಮಿ ಅತ್ತಿಗೇರಿಯಲ್ಲಿ ಒಂದು ತಿಂಗಳು ಪ್ರವಚನ ನೀಡಿದ್ದರು ಎಂದರು.
ರಾಜಕಾರಣದಿಂದ ದೂರವಿದ್ದರೂ ಸಹ ನಾನು ಸಿಎಂ ಆದ ಸಂದರ್ಬದಲ್ಲಿ ನಾಡಿಗೆ ನಿನ್ನಿಂದ ಒಳ್ಳೆಯದಾಗಲಿ ಎಂದು ಹಾರೈಸಿದ್ದರು. ನಾನು ಸಹ ಪಾವಿತ್ರ್ಯತೆಯಿಂದ ಒಪ್ಲಿಕೊಂಡಿರುವ ಏಕೈಕ ಗುರು. ಸಿದ್ದೇಶ್ವರ ಶ್ರೀಗಳು ಇರುವುದೇ ಅದೊಂದು ಪ್ರೇರಣಾ ಶಕ್ತಿ, ಭಗವಂತ ಅವರಿಗೆ ಆರೋಗ್ಯ ಕಲ್ಪಿಸಲಿ ಎಂದು ಪ್ರಾರ್ಥಿಸುವೆ. ಧರ್ಮದ ಚೌಕಟ್ಟು ಮೀರಿದ ತತ್ವಗಳನ್ನು ಪ್ರತಿಪಾದಿಸಿದ್ದು, ಧರ್ಮದ ಚೌಕಟ್ಟು ಮೀರಿ ತತ್ವಗಳ ಮೂಲಕ ಜೀವನ ಸಿದ್ಧಾಂತ ಪ್ರತಿಪಾದಿಸುತ್ತಿರುವ ಶ್ರೀಗಳು ವಿಶಿಷ್ಟವಾಗಿ ನಿಲ್ಲುತ್ತಾರೆ ಎಂದರು.
ಸಚಿವ ಗೋವಿಂದ ಕಾರಜೋಳ, ಶಾಸಕ ಅರವಿಂದ ಬೆಲ್ಲದ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಜೊತೆಗಿದ್ದರು.