ಬಳ್ಳಾರಿ: ನಾನು ಜನರ ಸೇವೆ ಮಾಡುವ ನಿಯತ್ತಿನ ನಾಯಿ ಇದ್ದಂತೆ ಎನ್ನುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಗರದ ವಿಮ್ಸ್ ಆವರಣದಲ್ಲಿ 400 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರು ನಾಯಿ ಮರಿಯಂತೆ ಪ್ರಧಾನಿ ಮೋದಿ ಮುಂದೆ ಗಡಗಡ ನಡುಗುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹೇಳಿಕೆಗೆ ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ಇಂತಹ ಹೇಳಿಕೆ ಅವರ ವ್ಯಕ್ತಿತ್ವ ತೋರಿಸುತ್ತದೆ ಎಂದರು.
ನಾಯಿ ನಿಯತ್ತಿನ ಪ್ರಾಣಿ. ನಾನು ಜನರಿಗಾಗಿ ನಿಯತ್ತಾಗಿ ಕೆಲಸ ಮಾಡುತ್ತಿದ್ದೇನೆ. ಜನರ ಪರವಾಗಿ ಈ ನಿಯತ್ತು ಉಳಿಸಿಕೊಂಡು ಹೋಗುತ್ತೇನೆ. ನಾನು ಸಿದ್ದರಾಮಯ್ಯ ರೀತಿ ಸಮಾಜ ಒಡೆಯುವ ಕೆಲಸ ಮಾಡಲ್ಲ. ಸೌಭಾಗ್ಯ ಕೊಡುತ್ತೇವೆಂದು ದೌರ್ಭಾಗ್ಯ ಕೊಟ್ಟಿಲ್ಲ. ಸುಳ್ಳು ಹೇಳಿಲ್ಲ. ಈ ಹಿಂದೆ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಸಿದ್ದರಾಮಯ್ಯ ಬಳಿ ರಾಜ್ಯಕ್ಕೆ ನಯಾಪೈಸೆ ತರಲು ಆಗಲಿಲ್ಲ. ರಾಜ್ಯಕ್ಕೆ ಅವರ ಕೊಡುಗೆ ಏನೂ ಇಲ್ಲ ಎಂದರು.
ಪ್ರಧಾನಿ ಮೋದಿ ರಾಜ್ಯಕ್ಕೆ 6 ಸಾವಿರ ಕಿಮೀ ಹೆದ್ದಾರಿ ಕೊಡುಗೆಯಾಗಿ ನೀಡಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿ ಯೋಜನೆ ನೀಡಿದ್ದಾರೆ. ಮಂಗಳೂರು- ಕಾರವಾರ ಬಂದರು, ಕಳಸಾ ಬಂಡೂರಿ ನಾಲಾ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ನೀಡಿದ್ದಾರೆ. ಎಲ್ಲ ಜಿಲ್ಲೆಗಳಿಗೆ ಸ್ಮಾರ್ಟ್ ಸಿಟಿ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಕೊಡುವ ಕಾಮಧೇನು. ದುರಂತವೆಂದರೆ ಸಿದ್ದರಾಮಯ್ಯಗೆ ಈ ಯೋಜನೆಗಳ ಬಗ್ಗೆ ಜ್ಞಾನವೇ ಇಲ್ಲ. ಅವರು ಬರೀ ರಾಜಕೀಯಕ್ಕಾಗಿ ಕ್ಷುಲ್ಲಕ ಹೇಳಿಕೆ ಕೊಡುವುದನ್ನೇ ರೂಢಿಸಿಕೊಂಡಿದ್ದಾರೆ ಎಂದರು.
ಅಧಿವೇಶನದಲ್ಲಿ ಏಕೆ ಮಾತನಾಡಲಿಲ್ಲ:
ಸಿದ್ದರಾಮಯ್ಯ ಅಧಿವೇಶನದಲ್ಲಿ ಚರ್ಚೆ ಮಾಡಲ್ಲ. ಈಗ ಬಹಿರಂಗ ಚರ್ಚೆಗೆ ಆಹ್ವಾನ ಕೊಡ್ತಾರೆ. ವಿಧಾನಸಭೆಗಿಂತ ದೊಡ್ಡ ವೇದಿಕೆ ಯಾವುದಿದೆ. ಈಚೆಗೆ ಬೆಳಗಾವಿಯಲ್ಲಿ 15 ದಿನ ಅಧಿವೇಶನ ನಡೆಯಿತು. ಅದಕ್ಕಿಂತಲೂ ಹಿಂದೆ ಬೆಂಗಳೂರಿನಲ್ಲಿ ಸದನ ಸಭೆ ನಡೆಯಿತು. ಇದೀಗ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಅಧಿವೇಶನ ನಡೆಯಲಿದೆ. ಅಲ್ಲಿ ಚರ್ಚೆ ಮಾಡಲ್ಲ. ಅ ಧಿವೇಶನದ ಸಂದರ್ಭ ಏನೂ ಮಾತನಾಡದ ಅವರು, ಹೊರಗೆ ರಾಜಕೀಯವಾಗಿ ಲಾಭ ಪಡೆಯುವ ಉದ್ದೇಶದಿಂದ ಬಹಿರಂಗ ಚರ್ಚೆ ಹೇಳಿಕೆ ಕೊಡುತ್ತಾರೆ. ಇಂತಹ ಗಿಮಿಕ್ ಮಾತುಗಳನ್ನೆಲ್ಲ ಜನ ಗಮನಿಸುತ್ತಾರೆ ಎಂದರು.