Advertisement

ಸಿದ್ದರಾಮಯ್ಯ ದೊಡ್ಡ ದೊಡ್ಡ ಮಾತನಾಡುತ್ತಾರಷ್ಟೇ, ಧಮ್ ಇಲ್ಲ: ಸಿಎಂ ಬೊಮ್ಮಾಯಿ

05:39 PM Oct 18, 2022 | Team Udayavani |

ಬೀದರ್: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಹಗರಣ ಮತ್ತು ಅವ್ಯವಹಾರ ಸಂಬಂಧ ಎಲ್ಲ ಮಾಹಿತಿ, ದಾಖಲೆಗಳನ್ನು ರಾಹುಲ್ ಗಾಂಧಿಯವರಿಗೆ ಮುಟ್ಟಿಸುತ್ತೇನೆ. ಅವರು ಏನು ಶಿಕ್ಷೆ ಕೊಡುತ್ತಾರೆ ಕಾದು ನೋಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲು ಹಾಕಿದ್ದಾರೆ.

Advertisement

ಔರಾದ ಪಟ್ಟಣದಲ್ಲಿ ಮಂಗಳವಾರ ‘ಜನಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, 2016ರ ಶಿಕ್ಷಕರ ನೇಮಕಾತಿ ಹಗರಣ, ಪ್ರಾಸಿಕ್ಯೂಟರ್ ಮತ್ತು ಪೊಲೀಸ್ ನೇಮಕಾತಿಯಲ್ಲಿನ ಹಗರಣ ಸೇರಿ ಎಲ್ಲ ದಾಖಲೆಗಳನ್ನು ರಾಹುಲ್‌ಗೆ ಕೊಡಲಿದ್ದೇನೆ. ಅರ್ಜಿ ಹಾಕದೇ ಶಿಕ್ಷಕರ ನೇಮಕಾತಿ ನಡೆದಿದ್ದು, ಇದರಲ್ಲಿ ಎಷ್ಟು ಪರ್ಸಂಟೇಜ್ ಹೊಡೆದಿರಬಹುದು? ಇದು ಕಾಂಗ್ರೆಸ್ ಸರ್ಕಾರದ ಆಡಳಿತ. ಆದರೆ, ನಾವು ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಉನ್ನತ ಅಧಿಕಾರಿಗಳು ಸೇರಿ ತಪ್ಪು ಮಾಡಿದ್ದವರನ್ನು ಯಾರಿಗೂ ಬಿಡಲಿಲ್ಲ. ಸಿದ್ದರಾಮಯ್ಯ ಕೇವಲ ದೊಡ್ಡ ದೊಡ್ಡ ಮಾತನಾಡುತ್ತಾರಷ್ಟೇ, ಧಮ್ ಇಲ್ಲ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ ಕಾಂಗ್ರೆಸ್ ಪಕ್ಷದ ಕೊಡುಗೆ ಎಂದು ಹೇಳಲು ರಾಹುಲ್ ಗಾಂಧಿಗೆ ಆತ್ಮಸಾಕ್ಷಿ ಬೇಕಲ್ಲವೇ ಎಂದು ಪ್ರಶ್ನಿಸಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಯಾರ ಸರ್ಕಾರ ಇದೆ, ನಿರ್ಣಯ ತೆಗೆದುಕೊಂಡವರು ಯಾರು ಅರಿಯಬೇಕು. ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೀನ ದಲಿತರಿಗೆ ಶೂನ್ಯ ಕೊಡುಗೆ ನೀಡಿದೆ ಎಂದು ಹೇಳಿದರು.

ಇದನ್ನೂ ಓದಿ:90 ಕೋಟಿ ವೆಚ್ಚದ ಸಿಪೆಟ್ ಕೇಂದ್ರಕ್ಕೆ ಸಿಎಂ ಬೊಮ್ಮಾಯಿ ಶಿಲಾನ್ಯಾಸ

ಬಿಜೆಪಿ ಸರ್ಕಾರ ಹತ್ತು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜನಪರ ಆಡಳಿತ ನೀಡುತ್ತಿದೆ. ತಾಂಡಾಗಳ ಅಭಿವೃದ್ಧಿ, ಬಡವರ ಸಂಕಷ್ಟಕ್ಕೆ ನಾವು ನೆರವಾಗಿದ್ದೇವೆ. 23 ಸಾವಿರ ತಾಂಡಾಗಳನ್ನು ಗ್ರಾಮಗಳನ್ನಾಗಿ ಆದೇಶಿಸಿ, ಮನೆಗಳಿಗೆ ಹಕ್ಕಪತ್ರ ನೀಡುವ ಮೂಲಕ ಹಲವು ದಶಕಗಳ ಬೇಡಿಕೆಯನ್ನು ಈಡೇರಿಸಿದ್ದೇವೆ. ಪ್ರವಾಹ ಬಂದಾಗ ಬೆಳೆ ಹಾನಿ ಮತ್ತು ಮನೆ ಹಾನಿಗೆ ಸಂಬಂಧಿಸಿದ ಮೊತ್ತವನ್ನು ಹೆಚ್ಚಿಸಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಪರಿಹಾರ ಕೊಡಲು ವರ್ಷ ಬೇಕಾಗುತ್ತಿತ್ತು. ಆದರೆ, ಈಗ ಕೇವಲ ಒಂದು ತಿಂಗಳಿನಲ್ಲಿ ಪರಿಹಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.

Advertisement

ಸಮಾವೇಶದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚವ್ಹಾಣ, ಬಿ. ಶ್ರೀರಾಮಲು, ಭೈರತಿ ಬಸವರಾಜ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಸೇರಿದಂತೆ ಶಾಸಕರು, ಪ್ರಮುಖರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next