ಬೆಂಗಳೂರು: “ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮೂರ್‍ನಾಲ್ಕು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ್ ಭಂಡಾರಿ ಯವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್‌ಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಹಿನ್ನೆಲೆ ಯಲ್ಲಿ ಆದ್ಯತೆ ಮೇರೆಗೆ ಅವುಗಳ ಬಲ ವರ್ಧನೆಗೊಳಿಸುತ್ತಿದ್ದು, ಖಾಲಿ ಇರುವ ಹುದ್ದೆಗಳ ಭರ್ತಿ ಸೇರಿದಂತೆ ಪಂಚಾಯತ್ ಸಂಪೂರ್ಣ ಸೇವೆಗಳನ್ನು ಒದಗಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯ 6,021 ಹುದ್ದೆಗಳ ಪೈಕಿ 5,029 ಈಗಾಗಲೇ ಭರ್ತಿ ಮಾಡಲಾಗಿದೆ. 726 ಹುದ್ದೆಗಳು ಮುಂಭಡ್ತಿಯಿಂದ ತೆರವಾಗಿವೆ. ಇದರಲ್ಲಿ 326 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳ ಲಾಗುತ್ತಿದೆ. ಪಂಚಾಯತ್ ಕಾರ್ಯದರ್ಶಿ ದರ್ಜೆ- 1ರಲ್ಲಿ 635 ಹುದ್ದೆಗಳು ಖಾಲಿ ಇದ್ದು, 487 ಹುದ್ದೆಗಳ ನೇರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದೇ ರೀತಿ, ಪಂಚಾಯತ್ ಕಾರ್ಯದರ್ಶಿ ದರ್ಜೆ-2ರಲ್ಲಿ 3,827 ಹುದ್ದೆಗಳಲ್ಲಿ 2,800ಕ್ಕೂ ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಮುಂಭಡ್ತಿಯಿಂದ ಕೆಲ ಹುದ್ದೆಗಳು ತೆರವಾಗಿದ್ದು, 343 ಹುದ್ದೆಗಳ ಭರ್ತಿ ಮಾಡಲಾಗುವುದು. 625 ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿದ್ದು, 145 ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನಲ್ಲೂ ಪ್ರೋತ್ಸಾಹಧನ:
ಅಮೃತ ಯೋಜನೆ ಅಡಿ ಗ್ರಂಥಾಲಯ, ನವೀಕರಿಸಬಹುದಾದ ಇಂಧನ, ಕುಡಿಯುವ ನೀರು ಮತ್ತಿತರ ಪ್ರಮುಖ ಸೇವೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯದ 750 ಗ್ರಾ.ಪಂ.ಗಳಿಗೆ ತಲಾ 25 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗಿದೆ. ಇದನ್ನು ಈ ವರ್ಷವೂ ಮುಂದುವರಿಸುವುದಾಗಿ ಸಿಎಂ ತಿಳಿಸಿದರು.