ಧಾರವಾಡ: ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮ ಪ್ರಕರಣದಲ್ಲಿ ಭಾಗಿಯಾದವರ ಹೆಸರುಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಸಹೋದರನ ಅಗಲಿಕೆಯ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಐಡಿ ಅಧಿಕಾರಿಗಳು ಬಂಧಿಸಿದವರಲ್ಲಿ ಕೆಲವರನ್ನು ಸಚಿವರಾದ ಆರಗ ಜ್ಞಾನೇಂದ್ರ ಮತ್ತು ಅಶ್ವಥ್ ನಾರಾಯಣ ಹೊರಗಡೆ ತಂದಿದ್ದಾರೆ. ಎಷ್ಟೋ ಜನ ನಾಯಕರ ಹೆಸರುಗಳು ವಿಚಾರಣೆಯ ವೇಳೆ ಬಂಧಿತರಿಂದ ಹೊರ ಬಂದಿವೆ. ಆದರೆ ಗೃಹ ಸಚಿವರು ಮತ್ತು ಸಚಿವ ಅಶ್ವಥ್ ನಾರಾಯಣ ಮೂಗಿನ ಕೆಳಗೆ ಎಲ್ಲ ತನಿಖೆ ನಡೆಯುತ್ತಿದೆ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಕೂಡ ಶಾಮೀಲಾಗಿದ್ದು, ಹೀಗಾಗಿ ಗೃಹ ಸಚಿವರು ತನಿಖೆ ಮಾಡುವವರನ್ನು ಮುಕ್ತವಾಗಿ ಬಿಡಬೇಕು. ಯಾಕೆಂದರೆ ಗೃಹ ಸಚಿವರೇ ಅಪರಾಧಿಯಾಗಿದ್ದು, ಇದರಲ್ಲಿನ ಎಲ್ಲ ಕಳ್ಳರ ರಕ್ಷಣೆಯನ್ನು ಇವರೇ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಸಿಎಂ ಪಾರದರ್ಶಕತೆ ಉಳಿದುಕೊಳ್ಳಬೇಕಿದೆ. ಸಿಎಂ ಇದರಲ್ಲಿ ಭಾಗಿ ಅಂತಾ ನಾ ಹೇಳಲಾರೆ. ಸಿಎಂ ಭಾಗಿಯಾಗಿಲ್ಲ ಅಂತಾದರೆ ಭಾಗಿಯಾದವರ ಹೆಸರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಸಚಿವ ಅಶ್ವಥ್ ನಾರಾಯಣ ಅವರ ವೃತ್ತಿಯೇ ಇಂತಹ ಸರ್ಟಿಫಿಕೇಟ್ ಕೊಡಿಸುವಂತಹುದು. ಡಿಗ್ರಿ, ಬೋಗಸ್ ಸರ್ಟಿಫಿಕೇಟ್ ಕೊಡಿಸುವುದನ್ನು ಮಾಡಿದವರು. ಹೀಗಾಗಿ ಸಚಿವರ ರಾಜೀನಾಮೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಅವರೇ ನೇರವಾಗಿ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂಬುದಾಗಿ ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ನೇರವಾಗಿ ಹೇಳಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿಯವರ ಬಳಿ ಹೆಚ್ಚಿಗೆ ಮಾಹಿತಿ ಇದೆ ಎಂದರು.
ಇದನ್ನೂ ಓದಿ:ಲಿಂಬೆಹಣ್ಣು ಹಗರಣ! ಪಂಜಾಬ್ ಜೈಲು ಅಧಿಕಾರಿ ಅಮಾನತು, ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಕೆಪಿಸಿಸಿ ಮಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ, ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಜತ ಉಳ್ಳಾಗಡ್ಡಿಮಠ, ಬಸವರಾಜ ಕಿತ್ತೂರ, ಸ್ವಾತಿ ಮಾಳಗಿ, ವಸಂತ ಅರ್ಕಾಚಾರ, ಯಾಸೀನ ಹಾವೇರಿಪೇಟ, ರೋಹಣ ಹಿಪ್ಪರಗಿ, ಸತೀಶ ತುರಮರಿ, ಪ್ರಭಾವತಿ ವಡ್ಡೀನ್, ನಿಜಾಮ ರಾಹಿ, ಹಜರತಅಲಿ ಗೊರವನಕೊಳ್ಳ ಇದ್ದರು.