ಹೊಸಪೇಟೆ :ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಬಿಜೆಪಿ 2023ರಲ್ಲಿ ಮತ್ತೆ ಅಧಿಕಾರ ಪಡೆಯುವುದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಾರೋಪ ಭಾಷಣದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ನರೇಂದ್ರ ಮೋದಿಜಿ ನಾಯಕತ್ವವಿದ್ದು, ಅವರು ವಿಶ್ವಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ. ಇಂಥ ನಾಯಕತ್ವ ಮತ್ತು ಅಭಿವೃದ್ಧಿ ಕಾರ್ಯಗಳಿಂದ ಬಿಜೆಪಿ ಗೆಲುವು ಖಚಿತ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ವಿಜಯಪತಾಕೆ ಹಾರಿಸಲು ವಿಜಯನಗರದಿಂದಲೇ ಸಂಕಲ್ಪ ಮಾಡಿದ್ದೇವೆ ಎಂದರು.
2ಜಿ ಯಲ್ಲಿ, ಭೂಮಿ ಕೆಳಗೆ ಭ್ರಷ್ಟಾಚಾರ, ಭೂಮಿ ಮೇಲೆ- ಭೂಮಿಯಲ್ಲಿ ಭ್ರಷ್ಟಾಚಾರ ಕಾಂಗ್ರೆಸ್ ಕೊಡುಗೆಯಾಗಿತ್ತು. ದೇಶವನ್ನು ಅತ್ಯಂತ ದುರ್ಬಲವಾಗಿ ಕಾಂಗ್ರೆಸ್ ಮಾಡಿತ್ತು. ಆದರೆ, ಮೋದಿಯವರ ದೇಶಪ್ರೇಮ, ಪ್ರಾಮಾಣಿಕತೆ, ರೈತರ ಮತ್ತು ದುರ್ಬಲರ ಬಗೆಗಿನ ಕಳಕಳಿಯಿಂದ ಬಿಜೆಪಿ ಮತ್ತೆ 2019ರಲ್ಲಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ದೇಶದೆಲ್ಲೆಡೆ ಮುಳಗುತ್ತಾ ಸಾಗಿದೆ. ಬಿಜೆಪಿ ಜನಮೆಚ್ಚುಗೆ ಪಡೆದುದಕ್ಕೆ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದರು.
2013ರಿಂದ ಬಂದ ಕಾಂಗ್ರೆಸ್ ಸರಕಾರದ ಕೆಟ್ಟ ಆಡಳಿತದಿಂದ ಹಿಂಸೆ, ಕೊಲೆ, ಸುಲಿಗೆ ಹೆಚ್ಚಾಗಿತ್ತು. ಹಿಂಸೆಯ ಹಿಂದಿದ್ದ ಪಿಎಫ್‍ಐ ಮೇಲಿನ 200ಕ್ಕೂ ಹೆಚ್ಚು ಕೇಸುಗಳನ್ನು ಸಿದ್ದರಾಮಯ್ಯ ಹಿಂಪಡೆದಿದ್ದರು. ಸಿದ್ದರಾಮಯ್ಯ ಮತಬ್ಯಾಂಕ್ ರಾಜಕೀಯ ಮಾಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್‍ನವರಿಗೆ ಅಧಿಕಾರ, ಮತಬ್ಯಾಂಕ್ ಮುಖ್ಯ. ಆದರೆ, ದೇಶ ಮುಖ್ಯವಲ್ಲ. ಹುಬ್ಬಳ್ಳಿ ಪೊಲೀಸ್ ಸ್ಟೇಶನ್ ಮೇಲೆ ದಾಳಿ ಆದರೆ ನಿಮ್ಮ ಧ್ವನಿಯೇ ಇಲ್ಲ. ಹಿಜಾಬ್ ವಿಚಾರವನ್ನು ಮೊಳಕೆಯಲ್ಲೇ ಚಿವುಟಬಹುದಿತ್ತು. ಆ ವಿಚಾರಕ್ಕೆ ಸಂಬಂಧಿಸಿ ನಿಮ್ಮ ಪಕ್ಷದ ವಕೀಲರು ವಾದ ಮಾಡುತ್ತಾರೆ. ಕೋರ್ಟ್ ಆದೇಶ ಪಾಲಿಸಿ ಎಂದು ಮಾತನಾಡಿಲ್ಲ ಯಾಕೆ? ಯಾವ ಕಡೆ ಹೊರಟಿದ್ದೀರಿ ನೀವು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಜೀಪ್ ಖರೀದಿ ಮೂಲಕ ನೆಹರೂ ಕಾಲದಿಂದ ಭ್ರಷ್ಟಾಚಾರ ಮಾಡಿಕೊಂಡು ಬಂದವರು ಕಾಂಗ್ರೆಸ್ಸಿಗರು. ಅಧಿಕಾರದಲ್ಲಿ ಇಲ್ಲದಾಗ ಹತ್ತಿ ಕಟ್ಟಿಗೆಯಂತಿರುತ್ತಾರೆ. ಅಧಿಕಾರ ಬಂದಾಗ ಕಬ್ಬಾಗುತ್ತಾರೆ. ತಹಶೀಲ್ದಾರರಿಂದ ಹಿಡಿದು ಎಲ್ಲ ಕಚೇರಿಯಲ್ಲೂ ಏಜೆಂಟರಿರುತ್ತಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರವನ್ನು ಸಕ್ರಮಗೊಳಿಸಿದ ಕಾಂಗ್ರೆಸ್ ಪಕ್ಷ ಮನೆ ಕಟ್ಟುವುದು, ಹಾಸ್ಟೆಲ್ ಸವಲತ್ತಿನಲ್ಲೂ ಭ್ರಷ್ಟಾಚಾರ, ಕಾಂಟ್ರಾಕ್ಟ್ ಗಳಲ್ಲಿ ಭ್ರಷ್ಟಾಚಾರ ಮಾಡಿದೆ. ಕಾಂಗ್ರೆಸ್ ತನ್ನ ಪಾಪದ ಪ್ರಾಯಶ್ಚಿತ್ತ ಪಡುವ ದಿನ ದೂರವಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡಿದ ಕೆಲಸಗಳ ಆಧಾರದಲ್ಲಿ ಚುನಾವಣೆಗೆ ಹೋಗುತ್ತೇವೆ. ಜನರು ಕಮಲವನ್ನು ಅರಳಿಸಿ ಕೊಡುವ ವಿಶ್ವಾಸವಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ಸಮರ ಇಲ್ಲಿಂದ ಆರಂಭವಾಗಿದೆ. ನವ ಕರ್ನಾಟಕಕ್ಕಾಗಿ ಕಾರ್ಯಕರ್ತರ ಶ್ರಮದಿಂದ ಗೆಲುವು ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.