ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರೈಲ್ವೆ ಯೋಜನೆಗಳ ಕುರಿತಾಗಿ ಚರ್ಚೆ ನಡೆಸಿದರು. ಆದರೆ ಸಿಎಂ ಬೊಮ್ಮಾಯಿ ಅವರು ಈ ಯೋಜನೆಗಳಿಗೆ ಒಪ್ಪಿಗೆ ಸೂಚಿಸಿಲ್ಲ ಎಂದು ವರದಿಯಾಗಿದೆ.
ಕಾಞಂಗಾಡ್- ಕಾಣಿಯೂರು ರೈಲು ಮಾರ್ಗ ಸೇರಿದಂತೆ ವಿವಿಧ ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಹಮತಿ ನೀಡುವಂತೆ ಕೇರಳ ಸರ್ಕಾರ ಕೋರಿದೆ. ಪ್ರಸ್ತಾಪಿತ ಕಾಞಂಗಾಡ್ – ಕಾಣಿಯೂರು ರೈಲು ಮಾರ್ಗವು ಕೇರಳದಲ್ಲಿ 40 ಕಿ.ಮೀ. ಹಾಗೂ ಕರ್ನಾಟಕದಲ್ಲಿ 31 ಕಿ.ಮೀ. ಮಾರ್ಗ ಹೊಂದಿದ್ದು, ರಾಜ್ಯಕ್ಕೆ ಇದರಿಂದ ಹೆಚ್ಚಿನ ಅನುಕೂಲಗಳಿಲ್ಲ. ಅಲ್ಲದೆ ಪಶ್ಚಿಮ ಘಟ್ಟದ ಜೀವ ವೈವಿಧ್ಯ ಸೂಕ್ಷ್ಮ ಪ್ರದೇಶದಲ್ಲಿ ಹಾದು ಹೋಗುವ ಕಾರಣ ಸಹಮತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಸಿಎಂ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ:ಗುರುಗ್ರಾಮ : ಕೆಟ್ಟು ಹೋದ ಲಿಫ್ಟ್ ನಲ್ಲಿ 2.5 ಗಂಟೆಗಳ ಕಾಲ ಸಿಕ್ಕಿಬಿದ್ದ 6 ವರ್ಷದ ಬಾಲಕ
ಅಲ್ಲದೆ ಇದೇ ವೇಳೆ ಹಳೆಯ ಯೋಜನೆಯಾದ ತಲಚೇರಿ- ಮೈಸೂರು ರೈಲು ಯೋಜನೆಯನ್ನೂ ಪ್ರಸ್ತಾಪಿಸಿದರು. ಆದರೆ ಈ ಯೋಜನೆಯ ರೈಲು ಮಾರ್ಗವು ಬಂಡಿಪುರ-ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮಧ್ಯಭಾಗದಲ್ಲಿ ಹಾದುಹೋಗುವುದರಿಂದ ಅಲ್ಲಿನ ವನ್ಯ ಜೀವಿ ಸಂಪತ್ತು ಹಾಗೂ ಅರಣ್ಯ ಸಂಪತ್ತಿಗೆ ಹಾನಿಯಾಗುತ್ತದೆ. ಆದ್ದರಿಂದ ಇದಕ್ಕೆ ಸಮ್ಮತಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ತಿಳಿಸಿದೆ. ಆಗ ಭೂಗತ ರೈಲು ಮಾರ್ಗ ನಿರ್ಮಿಸುವ ಕುರಿತು ಕೇರಳ ಸರ್ಕಾರವು ಪ್ರಸ್ತಾಪಿಸಿದ್ದು, ಆದರೆ ಇದರಿಂದಲೂ ನಿರ್ಮಾಣ ಚಟುವಟಿಕೆ ಸಂದರ್ಭದಲ್ಲಿ ಪರಿಸರ ಹಾನಿಯಾಗುವುದು. ಆದ್ದರಿಂದ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಯಿತು.
ಇದೀಗ ಕೇರಳಕ್ಕೆ ಬಂಡಿಪುರ ರಾಷ್ಟ್ರೀಯ ಉದ್ಯಾನದ ಮೂಲಕ ರಾತ್ರಿ ವೇಳೆ ಎರಡು ಬಸ್ ಗಳು ಸಂಚರಿಸುತ್ತಿದ್ದು, ನಾಲ್ಕು ಬಸ್ ಗಳಿಗೆ ಅನುಮತಿ ನೀಡುವಂತೆ ಕೋರಿದರು. ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.