ಬೆಂಗಳೂರು: ಮೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಕುರಿತು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು. ನಮ್ಮ ಸರ್ಕಾರ ಬಂದು ಒಂದು ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಪ್ರಥಮ ಸೂಚನೆ ಸಿಕ್ಕಿದೆ. ಆ ಮೂಲಕ ಜನರ ನಮಗೆ ಮನ್ನಣೆ ಕೊಡುತ್ತಿದ್ದಾರೆ. ಜೊತೆಗೆ ಬೆಂಬಲ ಕೊಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ದಿಕ್ಸೂಚಿಯಾಗಲಿದೆ ಎಂದರು.
ಬೆಳಗಾವಿ ಮತ್ತು ಹುಬ್ಬಳಿ ಧಾರವಾಡದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಳ್ಳುವ ಸಾಧ್ಯತೆ ಇದೆ. ಕಲ್ಬುರ್ಗಿಯಲ್ಲಿ ಎಣಿಕೆ ನಡೆಯುತ್ತಿದೆ, ಅಲ್ಲೂ ಕೂಡ ಬಹುಮತ ಪಡೆಯುವ ವಿಶ್ವಾಸವಿದೆ. ಮೂರು ಕಡೆ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ತಿಳಿಸುವೆ, ಜೊತೆಗೆ ಚುನಾವಣೆಯಲ್ಲಿ ಕೆಲಸ ಮಾಡಿದ ಮಂತ್ರಿಗಳ ಶಾಸಕರು , ಎಂಪಿಗಳು, ಕಾರ್ಯಕರರಿಗೆ ಅಭಿನಂದಿಸುತ್ತೇನೆ. ಚುನಾವಣೆ ಜವಾಬ್ದಾರಿ ಹೊತ್ತಿದ್ದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅರುಣ್ ಕುಮಾರ್ ಮತ್ತು ರವಿಕುಮಾರ್ ಗೆ ಅಭಿನಂದನೆಗಳು, ಬಿಜೆಪಿ ಮೇಲೆ ವಿಶ್ವಾಸ ತೋರಿದ ಮತದಾರರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ:ಮುಂದಿನ ಸಿಎಂ ಎಂದು ಟವಲ್ ಹಾಕಿದ ಕಾಂಗ್ರೆಸ್ ನವರು ತಮ್ಮ ಟವಲ್ ತೆಗೆಯಬೇಕಿದೆ: ನಳಿನ್ ಕಟೀಲ್
ಕಳೆದ ಬಾರಿ ಬೆಳಗಾವಿಯಲ್ಲಿ ನಮ್ಮ ಕಡಿಮೆ ಸೀಟ್ ಇತ್ತು. ಈ ಬಾರಿ ಬೆಳಗಾವಿಯಲ್ಲಿ ನಾವು ಅದ್ಭುತವಾಗಿ ಪ್ರದರ್ಶನ ತೋರಿದ್ದೇವೆ. ಮತದಾರರಿಗೆ ಸ್ಥಿರವಾದ ಆಡಳಿತ ಬೇಕೆಂದು ಬಯಸಿ ನಮಗೆ ಅಧಿಕಾರ ನೀಡಿದ್ದಾರೆ. ಬೆಳಗಾವಿ ಯಾವತ್ತು ರಾಷ್ಟ್ರೀಯ ಪಕ್ಷದ ಜೊತೆಗೆ ಇರುತ್ತದೆ ಎಂದು ಜನರು ತೋರಿಸಿದ್ದಾರೆ. ಹು- ಧಾ ನಮ್ಮ ಕೋಟೆ, ಅದನ್ನ ಸುಭದ್ರವಾಗಿ ಇಟ್ಕೊಂಡಿದ್ದೇವೆ. ಕಲಬುರಗಿಯಲಲ್ಲಿ ಮೊದಲ ಭಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾವು ಆಯ್ಕೆಯಾಗಿದ್ದೇವೆ, ಇನ್ನು ಫಲಿತಾಂಶ ಬಾಕಿ ಉಳಿದಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪರವರ ಆಶೀರ್ವಾದ, ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರ ಹೆಸರು ನಮಗೆ ಚುನಾವಣೆಯಲ್ಲಿ ಪ್ರೇರಣೆ ಆಗುತ್ತಿದೆ ಎಂದರು.