Advertisement

ಜಿಎಸ್‌ಟಿ ಸಮಿತಿಗೆ ಸಿಎಂ ಬೊಮ್ಮಾಯಿ ಸಾರಥ್ಯ

12:08 AM Sep 28, 2021 | Team Udayavani |

ಹೊಸದಿಲ್ಲಿ: ಪ್ರಸ್ತುತ ತೆರಿಗೆ ಸ್ಲ್ಯಾಬ್ ಗಳು, ಜಿಎಸ್‌ಟಿಯಿಂದ ವಿನಾ ಯಿತಿ ಹೊಂದಿರುವ ಸರಕುಗಳ ಪರಿಶೀಲನೆ, ತೆರಿಗೆ ತಪ್ಪಿಸುವ ಸಂಭಾವ್ಯ ಮೂಲಗಳ ಪತ್ತೆ ಮತ್ತು ಐಟಿ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಶಿಫಾರಸು ಮಾಡಲು ಕೇಂದ್ರ ವಿತ್ತ ಸಚಿವಾಲಯವು ಸೋಮವಾರ ಎರಡು ಸಮಿತಿಗಳನ್ನು ರಚಿಸಿದೆ. ಏಳು ಸದಸ್ಯರಿರುವ ರಾಜ್ಯ ಹಣಕಾಸು ಸಚಿವರ ಸಮಿತಿಯ ನೇತೃತ್ವವನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಲಾಗಿದೆ.

Advertisement

ದೇಶದಲ್ಲಿ ಜಿಎಸ್‌ಟಿ ಜಾರಿಯಾದ ನಾಲ್ಕು ವರ್ಷಗಳ ಬಳಿಕ ಈಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಿಎಸ್‌ಟಿ ದರ ಸ್ವರೂಪವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿವೆ. ಅದರಂತೆ ವಿವಿಧ ತೆರಿಗೆ ಸ್ಲ್ಯಾಬ್  ಗಳ ವಿಲೀನ, ಪ್ರಸ್ತುತ ಇರುವಸ್ಲ್ಯಾಬ್  ಗಳ ಪರಿಷ್ಕರಣೆಗೆ ಮುಂದಾಗಿವೆ.

ಸಂಸದೀಯ ಸಮಿತಿಯ ಕೆಲಸ ತೆರಿಗೆ ತಪ್ಪಿಸುವಿಕೆಯ ಮೂಲಗಳನ್ನು ಪತ್ತೆಹಚ್ಚಿ, ಉದ್ದಿಮೆ ಪ್ರಕ್ರಿಯೆ ಮತ್ತು ಐಟಿ ವ್ಯವಸ್ಥೆಯಲ್ಲಿ ಏನೇನು ಬದಲಾವಣೆ ತರಬಹುದು ಎಂಬ ಬಗ್ಗೆ ಸಲಹೆ ನೀಡಲಿದೆ. ಆ ಮೂಲಕ ತೆರಿಗೆ ಸೋರಿಕೆ ತಡೆಯಲಿದೆ. ಜತೆಗೆ ಕೇಂದ್ರ ಮತ್ತು ರಾಜ್ಯ ತೆರಿಗೆ ಆಡಳಿತ ವ್ಯವಸ್ಥೆಯ ನಡುವೆ ಸಮನ್ವಯ ಸಾಧಿಸುವ ಕೆಲಸವನ್ನೂ ಈ ಸಮಿತಿ ಮಾಡಲಿದೆ.

ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ಸೆ. 17ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಎರಡು ಸಮಿತಿಗಳ ರಚನೆ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು.

Advertisement

ಎರಡು ತಿಂಗಳುಗಳಲ್ಲಿ ವರದಿ
ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿಯಲ್ಲಿ ಪ. ಬಂಗಾಲ ವಿತ್ತ ಸಚಿವ ಅಮಿತ್‌ ಮಿತ್ರಾ, ಕೇರಳದ ವಿತ್ತ ಸಚಿವ  ಬಾಲಗೋಪಾಲ, ಬಿಹಾರ ಡಿಸಿಎಂ ತಾರಕಿಶೋರ್‌ ಪ್ರಸಾದ್‌  ಇರಲಿದ್ದಾರೆ. ಮುಂದಿನ 2 ತಿಂಗಳುಗಳಲ್ಲಿ ಸಮಿತಿ ವರದಿ ಸಲ್ಲಿಸಲಿದೆ. ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ನೇತೃತ್ವದಲ್ಲಿ 8 ಸದಸ್ಯರ ಸಚಿವರ ಸಮಿತಿ ರಚಿಸಲಾಗಿದೆ. ಇದರಲ್ಲಿ ದಿಲ್ಲಿಯ ಡಿಸಿಎಂ ಮನೀಶ್‌ ಸಿಸೋಡಿಯಾ, ತಮಿಳುನಾಡಿನ ಹಣಕಾಸು ಸಚಿವ ಪಳನಿವೇಳ್‌ ತ್ಯಾಗರಾಜನ್‌, ಛತ್ತೀಸ್‌ಗಢದ ಹಣಕಾಸು ಸಚಿವ ಟಿ.ಎಸ್‌. ಸಿಂಗ್‌ ದಿಯೋ ಮತ್ತಿತರರಿದ್ದಾರೆ. ಈ ಸಮಿತಿಯು ಜಿಎಸ್‌ಟಿ ವ್ಯವಸ್ಥೆ ಸುಧಾರಣೆ ಕುರಿತು ಸಲಹೆ ನೀಡಲಿದೆ.

ಬೊಮ್ಮಾಯಿ ಸಮಿತಿಯ ಕೆಲಸವೇನು?
– ತೆರಿಗೆ ದರಗಳ ಪರಿಷ್ಕರಣೆ ಸಲಹೆ
-ಸರಕು ಮತ್ತು ಸೇವೆಗಳ ವರ್ಗೀಕರಣ ಸಂಬಂಧಿತ ವಿವಾದ ತಗ್ಗಿಸುವುದು
-ಕೇಂದ್ರ, ರಾಜ್ಯ ಸರಕಾರಗಳ ಆದಾಯ ಸಂಗ್ರಹ ಹೆಚ್ಚಳಕ್ಕೆ ಉತ್ತೇಜನ
– ತತ್‌ಕ್ಷಣದ ಮತ್ತು ಅಲ್ಪಾವಧಿ-ಮಧ್ಯಮಾವಧಿಯಲ್ಲಿ ಅಗತ್ಯ ಬದಲಾವಣೆಗಳ ನೀಲನಕ್ಷೆ ಒದಗಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next