Advertisement

ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗದು: ಸಿಎಂ ಬೊಮ್ಮಾಯಿ

04:25 PM Oct 23, 2021 | Team Udayavani |

ಹಾವೇರಿ: ನಮ್ಮದು ಕೇವಲ ಮಾತುಗಳಲ್ಲ. ಕೆಲಸ ಮಾಡುತ್ತಿದ್ದೇವೆ. ಮಾತಿನಿಂದ ಹೊಟ್ಟೆ ತುಂಬುವುದಿಲ್ಲ ಎನ್ನುವುದು ಗೊತ್ತಿದೆ. ತಳಮಟ್ಟದಲ್ಲಿ ಮಾತಾಡಿದರೆ ದೊಡ್ಡವರಾಗಲ್ಲ. ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

Advertisement

ಹಾನಗಲ್ಲ ಕ್ಷೇತ್ರದ ಚಿಕ್ಕೌಶಿ- ಹೊಸೂರು ಗ್ರಾಮದಲ್ಲಿ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರನ್ನಾದರೂ ಆಯ್ಕೆ ಮಾಡಬೇಕಾದರೆ ಜನರು ತುಲನಾತ್ಮಕವಾಗಿ ನೋಡುತ್ತಾರೆ. ಉದಾಸಿ ಆರು ಬಾರಿ ಆಯ್ಕೆಯಾಗಿದ್ದರು ಎಂದರೆ ನಿಮ್ಮ ಹೃದಯದಲ್ಲಿ ಯಾವ ಸ್ಥಾನ ಪಡೆದಿದ್ದರು ಎನ್ನುವುದು ಗೊತ್ತಾಗುತ್ತದೆ. ಉದಾಸಿಯವರ ಜಾಗಕ್ಕೆ ಯೋಗ್ಯರನ್ನು ಆರಿಸಿ ಎಂದರು.

ತಿಳವಳ್ಳಿ ಏತ ನೀರಾವರಿ ಯೋಜನೆಗೆ ಮುಂಜುರಾತಿ ನೀಡಿದ್ದು ಯಡಿಯೂರಪ್ಪನವರು. 620 ಕೋಟಿ ರೂಪಾಯಿ ನೀರಾವರಿ ಯೋಜನೆಗಳಿಗೆ ಯಡಿಯೂರಪ್ಪ ಮಂಜೂರಾತಿ ನೀಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರೈತರು, ನೀರಾವರಿ, ಉತ್ತರ ಕರ್ನಾಟಕದ ಕಡೆ ತಿರುಗಿ ನೋಡಲಿಲ್ಲ ಎಂದರು.

ಇದನ್ನೂ ಓದಿ:ಬಿಜೆಪಿ ಆಡಳಿತದಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದರಾಮಯ್ಯ

ಟೀಕೆಗಳನ್ನು ಮೆಟ್ಟಿಲು ಮಾಡಿಕೊಳ್ಳುವೆ. ಎಷ್ಟೇ ಟೀಕೆ ಮಾಡಲಿ, ನನ್ನ ಲಕ್ಷ್ಯ ದೀನ ದಲಿತರ ಅಭಿವೃದ್ಧಿ, ಎಲ್ಲಾ ವರ್ಗದ ಅಭಿವೃದ್ಧಿ, ಕರ್ನಾಟಕದ ಅಭಿವೃದ್ಧಿ. ನಾನು ಈ ಗುರಿಯಿಂದ ವಿಚಲಿತವಾಗಲ್ಲ ಎಂದರು.

Advertisement

ಐದು ವರ್ಷ ಅಲ್ಪಸಂಖ್ಯಾತರನ್ನು ಬಾವಿಲಿ ಇಟ್ಟಿರುತ್ತಾರೆ. ಚುನಾವಣೆ ಸಮಯದಲ್ಲಿ ಅಲ್ಪಸಂಖ್ಯಾತರಿಗೆ ಹಗ್ಗ ಕೊಟ್ಟು ಮೇಲೆತ್ತುತ್ತಾರೆ. ಆಮೇಲೆ ಓಟ್ ಹಾಕಿದ ಮೇಲೆ ಮತ್ತೆ ಅಲ್ಪಸಂಖ್ಯಾತರನ್ನು ಬಾವಿಯಲ್ಲಿ ಬಿಡುತ್ತಾರೆ. ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತೇವೆ ಎನ್ನುತ್ತಾರೆ, ಆದರೆ ಅಲ್ಪ ಸಂಖ್ಯಾತರಿಗೆ ಅನ್ಯಾಯ ಮಾಡಿದ್ದೇ ಕಾಂಗ್ರೆಸ್ ಎಂದು ಆರೋಪಿಸಿದರು.

ನೀವು ಅಲ್ಪಸಂಖ್ಯಾತರ ರಕ್ಷಣೆ ಮಾಡುವುದಿಲ್ಲ. ಅಲ್ಪ ಸಂಖ್ಯಾತರೇ ನಿಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಕಾಂಗ್ರೆಸ್ ಬಿಟ್ಟು ಹಿಂದೆ ಸರಿದರೆ ಕಾಂಗ್ರೆಸ್ ವಿಳಾಸವೇ ಇರುವುದಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎನ್ನುತ್ತಾರೆ. ಆದರೆ ಕಾಂಗ್ರೆಸ್ ಈಗಾಗಲೇ ಮುಳುಗಿದೆ. ಬೇಕಾದರೆ ಭೂಪಟ ನೋಡಿ ಕಾಂಗ್ರೆಸ್ ನಲ್ಲಿ ಒಂಚೂರು ಕರ್ನಾಟಕದಲ್ಲಿ ಅಲ್ಲಾಡುತ್ತಿದೆ. ಇಲ್ಲಿ 30 ನೇ ತಾರೀಕು ನೀವು ಬಿಜೆಪಿಗೆ ಮತ ಹಾಕಿ. ಕರ್ನಾಟಕದಲ್ಲೂ ಅಲ್ಲಾಡುತ್ತಿರುವ ಕಾಂಗ್ರೆಸ್ ಹಡಗು ಮುಳುಗಿ ಹೋಗುತ್ತದೆ ಎಂದರು.

ಸಮಾವೇಶದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಬಿ.ಸಿ.ಪಾಟೀಲ, ಆರ್.ಅಶೋಕ, ನಾರಾಯಣಗೌಡ, ಸಂಸದರಾದ ಬಿ.ವೈ.ರಾಘವೇಂದ್ರ, ಶಿವಕುಮಾರ ಉದಾಸಿ, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next