ಬೆಳಗಾವಿ: ಕಾಯಿದೆಗಳ ಪರಿಶೀಲನೆ ಸಮಿತಿ ಮುಂದೆ ಯಾವ ಯಾವ ಕಾಯಿದೆಗಳು ಬರುತ್ತದೆ ನೋಡೋಣ. ಆ ನಂತರ ಅದನ್ನು ಸದನದಲ್ಲಿ ಮಂಡಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದು, ಪರೋಕ್ಷವಾಗಿ ಲವ್ ಜಿಹಾದ್ ನಿಷೇಧ ಕಾಯಿದೆ ಜಾರಿ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
ಬೆಳಗಾವಿ ಅಧಿವೇಶನಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮತಾಂತರ ನಿಷೇಧ ಕಾಯಿದೆಯನ್ನು ಕ್ಯಾಬಿನೆಟ್ ನಲ್ಲಿ ತಂದು, ಸದನದಲ್ಲಿ ಮಂಡಿಸುತ್ತೇವೆ ಎಂದರು.
ಇದನ್ನೂ ಓದಿ:ಬೆಂಬಲದ ಭಿಕ್ಷೆ ಬೇಡಿದವರು ಯಾರು? ‘ಮಿಸ್ಟರ್ ಟರ್ಮಿನೇಟರ್’ ಗೆ ಕುಮಾರಸ್ವಾಮಿ ಪ್ರಶ್ನೆ
ಉತ್ತರ ಕರ್ನಾಟಕ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲು ಸರ್ಕಾರ ಸಿದ್ದವಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ದವಿದೆ. ಹಲವು ಯೋಜನೆಗಳನ್ನು ತರಲು ಕ್ರಮ ಕೈಗೊಳ್ಳುತ್ತೇವೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಸದನದಲ್ಲಿ ಕೆಲ ನಿರ್ಣಯ ತೆಗೆದುಕೊಳ್ಳುತ್ತೇವೆ. ಈ ಸದನದ ಮೂಲಕ ಜನರು ಖಂಡಿತ ನಿರೀಕ್ಷೆ ಮಾಡಬಹುದು ಎಂದರು.
ಕೃಷಿ ಕಾಯಿದೆ ವಿರೋಧಿಸಿ ರೈತರ ಪ್ರತಿಭಟನೆ ವಿಚಾರಕ್ಕೆ ಮಾತನಾಡಿದ ಅವರು, ರೈತರ ಜೊತೆ ಚರ್ಚಿಸುತ್ತೇನೆ ಎಂದರು. ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತೀರಾ ಎಂಬ ಪ್ರಶ್ನೆಗೆ, ”ನೋಡೋಣ, ರೈತರು ಏನು ಹೇಳ್ತಾರೆ ಎಂದು ಕೇಳಿ ಎಂದು ತೀರ್ಮಾನ ಮಾಡುತ್ತೇನೆ” ಎಂದಷ್ಟೇ ಉತ್ತರಿಸಿದರು.