ಬೆಂಗಳೂರು: ರಾಜ್ಯ ಬಿಜೆಪಿ ವಲಯದಲ್ಲಿ ಕಳೆದ ಕೆಲ ದಿನಗಳಿಂದ ಮಗುಮ್ಮಾಗಿ ನಡೆಯುತ್ತಿದ್ದ ” ಸಿಎಂ ಬದಲಾವಣೆ” ಗುಸು ಗುಸು ಈಗ ಬಹಿರಂಗ ಚರ್ಚೆಯ ಸ್ವರೂಪ ಪಡೆದುಕೊಂಡಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲೇ ಸಿಎಂ ಬದಲಾವಣೆಯಾಗಲಿದ್ದಾರೆ ಎಂಬ ಬಿಜೆಪಿ ಮುಖಂಡರ ಪಿಸುಮಾತು ಹೆಚ್ಚಿದೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳುತ್ತಾರೆ. ಹೀಗಾಗಿ ಬದಲಾವಣೆ ಅನಿವಾರ್ಯ ಎಂಬ ಚರ್ಚೆ ನಡೆಯುತ್ತಿದೆ. ಬಸವರಾಜ್ ಬೊಮ್ಮಾಯಿ ಕಳೆದ ಕೆಲ ದಿನಗಳಿಂದ ತೀವ್ರ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ನಡೆಯುವಾಗ ಸಮಸ್ಯೆಯಾಗುತ್ತಿದೆ. ಹೀಗಾಗಿ ಶಸ್ತ್ರ ಚಿಕಿತ್ಸೆ ಹಾಗೂ ಮೂರು ತಿಂಗಳು ವಿಶ್ರಾಂತಿಯ ಅಗತ್ಯವಿದೆ. ತಿಂಗಳುಗಳ ಕಾಲ ಮುಖ್ಯಮಂತ್ರಿ ಅನುಪಸ್ಥಿತಿ ಆಡಳಿತಾತ್ಮಕ ಸಮಸ್ಯೆಗಳಿಗೆ ಇಂಬು ನೀಡುವುದರಿಂದ ಬದಲಾವಣೆ ಸಾಧ್ಯತೆ ಹೆಚ್ಚು ಎಂಬುದು ಬಿಜೆಪಿ ಆಂತರಿಕ ವಲಯದ ಸುದ್ದಿ.
ಇದಕ್ಕೆ ಪೂರಕವಾಗಿ ಬಿಜೆಪಿಯ ಹಿರಿಯ ನಾಯಕರು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಪದೇ ಪದೇ ಹೇಳುವುದೂ ಅನುಮಾನಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಸಚಿವ ಈಶ್ವರಪ್ಪ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಬದಲಾವಣೆಯಾಗಬಹುದೆಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
ಇದೆಲ್ಲದಕ್ಕಿಂತ ಮುಖ್ಯವಾಗಿ ಖುದ್ದು ಸಿಎಂ ಬೊಮ್ಮಾಯಿಯವರೇ ನೀಡಿದ ” ಅಧಿಕಾರ ಅಶಾಶ್ವತ ” ಹೇಳಿಕೆ ಭವಿಷ್ಯದ ರಾಜಕೀಯ ಬೆಳವಣಿಗೆಗಳಿಗೆ “ಬಿಂದು ಜೋಡಣೆ” ಯ ಕೆಲಸ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.ಆದರೆ ರಾಜಕೀಯವಾಗಿ ಈ ಹಂತದಲ್ಲಿ ಮುಖ್ಯಮಂತ್ರಿ ಬದಲಾವಣೆಯಂಥ ಸಾಹಸಕ್ಕೆ ಮುಂದಾಗುವುದು ಮುಂದಿನ ಚುನಾವಣೆ ದೃಷ್ಟಿಯಿಂದ ಸರಿಯಲ್ಲ. ಇಂಥ ತಪ್ಪು ಹೆಜ್ಜೆ ಬೇಡ. ಪ್ರತಿ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ಮೂರು ಮುಖ್ಯಮಂತ್ರಿ ಕಾಣಬೇಕಾಗುತ್ತದೆ ಎಂಬ ಸಂದೇಶ ಸ್ಥಾಪನೆಯಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜಕೀಯ ಅನಿಶ್ಚಿತತೆ ಖಚಿತ ಎಂಬ ಭಾವನೆ ಮತದಾರರಲ್ಲಿ ಮೂಡಿದರೆ ಮುಂದಿನ ಚುನಾವಣೆ ಎದುರಿಸುವುದು ಕಷ್ಟ ಎಂಬ ಅಭಿಪ್ರಾಯ ಬಿಜೆಪಿ ಹಿರಿಯರಿಂದ ವ್ಯಕ್ತವಾಗಿದೆ. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯಿಸದೇ ಮೌನಕ್ಕೆ ಶರಣಾಗಿದೆ.
ಸಮಸ್ಯೆ ಇಲ್ಲ
ಇದೆಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ , ” ಮುಖ್ಯಮಂತ್ರಿ ಬದಲಾವಣೆ ಕೇವಲ ವದಂತಿ. ಬೊಮ್ಮಾಯಿಯವರಿಗೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯಬಹುದಾದಂಥ ಆರೋಗ್ಯ ಸಮಸ್ಯೆ ಇಲ್ಲ. ಮಂಡಿ ನೋವಿಗೆ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ. ನೋವು ಉಪಶಮನವಾಗುತ್ತಿದೆ ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದಾಗಿಯೂ ಬಿಜೆಪಿ ವಲಯದಲ್ಲಿ ಸಂಕ್ರಾತಿ ಎಂಬುದು ರಾಜಕೀಯ ” ಸಂಕ್ರಮಣ”ಕ್ಕೆ ಕಾರಣವಾಗಲಿದೆಯೇ ಎಂಬ ಕುತೂಹಲ ಮಾತ್ರ ಈಗಲೂ ಉಳಿದುಕೊಂಡಿದೆ.