Advertisement

ಕಾಯಕಜೀವಿಗಳಿಗೆ “ವಿಮೆ’ಯ ರಕ್ಷೆ

11:14 PM Feb 17, 2023 | Team Udayavani |

ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಬಹುತೇಕ ಎಲ್ಲ ಕಾರ್ಮಿಕರಿಗೆ ಇನ್ನು “ವಿಮೆಯ ಭದ್ರತೆ’ ಸಿಗಲಿದೆ. ಇದು 2023-24ರ ಸಾಲಿನ ಬಜೆಟ್‌ನ ವಿಶೇಷತೆಗಳಲ್ಲಿ ಒಂದು.

Advertisement

ಸಾರಿಗೆ ಸಿಬ್ಬಂದಿಗೆ ಈ ಮೊದಲೇ ವಿಮೆ ಭದ್ರತೆ ಒದಗಿಸಿದ್ದ ಸರ್ಕಾರ ಇದೀಗ ಈ ಕ್ಷೇತ್ರದಲ್ಲಿನ ಅಸಂಘಟಿತ ಕಾರ್ಮಿಕರಾದ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಲಾರಿ ಚಾಲಕರಿಗೆ ವಿಮೆ ಭದ್ರತೆ ಒದಗಿಸುವ ಘೋಷಣೆ ಮಾಡಿದೆ.

ಇಷ್ಟು ಮಾತ್ರವಲ್ಲದೇ ಇ ಕಾಮರ್ಸ್‌ ಸಂಸ್ಥೆ (ಅಮೆಜಾನ್‌, ಸ್ವಿಗ್ಗಿ, ಝೊಮ್ಯಾಟೋ ಇತ್ಯಾದಿ)ಗಳ ಡೆಲಿವರಿ ಸೇವೆಗಳನ್ನು ಒದಗಿಸುವವರನ್ನು (ಗಿಗ್‌ ವರ್ಕ ರ್ಸ್‌) ವಿಮಾ ವ್ಯಾಪ್ತಿಗೆ ತರುವ ಪ್ರಯತ್ನ ಮಾಡಿದೆ.

ಆಟೋ, ಟ್ಯಾಕ್ಸಿ ಮತ್ತು ಲಾರಿ ಚಾಲಕರು ಮತ್ತು ಇ ಕಾಮರ್ಸ್‌ ಡೆಲಿವರಿ ಸೇವೆಗಳನ್ನು ನೀಡುವವರು ಮೃತಪಟ್ಟರೆ ತಲಾ 2 ಲಕ್ಷ ರೂ ವಿಮಾ ಸೌಲಭ್ಯ, ಒಂದು ವೇಳೆ ಅಪಘಾತದಲ್ಲಿ ಮರಣ ಹೊಂದಿದರೆ ಮತ್ತೆ 2 ಲಕ್ಷ ರೂ.ನಂತೆ ಒಟ್ಟು 4 ಲಕ್ಷ ರೂ ಗಳ ವಿಮಾ ಸೌಲಭ್ಯ ಕಲ್ಪಿಸಲು “ಮುಖ್ಯಮಂತ್ರಿ ವಿಮಾ ಯೋಜನೆ’ ರಚಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಈ ಮೂಲಕ 16.50 ಲಕ್ಷ ಚಾಲಕರಿಗೆ ನೆರವು ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಆದರೆ ಈ ಯೋಜನೆಗೆ ಅಗತ್ಯವಾದ ಹಣಕಾಸು ಮೊತ್ತವನ್ನು ಬಜೆಟ್‌ನಲ್ಲಿ ಉಲ್ಲೇಖೀಸಲಾಗಿಲ್ಲ.

1,200 ಹೊಸ ಬಸ್‌ಗೆ 500 ಕೋಟಿ ರೂ
ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ಈಗಾಗಲೇ ಬಸ್‌ಗಳ ತೀವ್ರ ಕೊರತೆಯಿದ್ದು ಗ್ರಾಮೀಣ ಕರ್ನಾಟಕದ ಸಾರಿಗೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಇಷ್ಟು ಮಾತ್ರವಲ್ಲದೆ ಹೊಸ ಗುಜರಿ ನೀತಿ ಜಾರಿಯಲ್ಲಿರುವುದರಿಂದ ಸಾವಿರಾರು ಹಳೆಯ ಬಸ್‌ಗಳನ್ನು ಸೇವೆಯಿಂದ ಹಿಂತೆಗೆದುಕೊಳ್ಳುವ ಅನಿವಾರ್ಯತೆ ಸಾರಿಗೆ ನಿಗಮಕ್ಕಿದೆ. ಆದುದರಿಂದ ಬಸ್‌ಗಳ ಸಂಖ್ಯೆ ಇನ್ನಷ್ಟು ಕುಸಿತವಾಗಿ ರಾಜ್ಯದ ಸಾರಿಗೆ ವ್ಯವಸ್ಥೆ ಹಳಿ ತಪ್ಪುವ ಆತಂಕ ಸೃಷ್ಟಿಯಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಸರ್ಕಾರ 1,200 ಹೊಸ ಬಸ್‌ಗಳನ್ನು ಖರೀದಿಸಲು ಮುಂದಾಗಿದ್ದು 500 ಕೋಟಿ ರೂ ನೆರವನ್ನೂ ಘೋಷಿಸಿದೆ. ರಾಜ್ಯದ ಸಾರಿಗೆ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಮೊತ್ತವನ್ನು ಹೊಸ ಬಸ್‌ ಖರೀದಿಗೆ ವಿನಿಯೋಗಿಸಲಾಗುತ್ತಿದೆ.

ತುಮಕೂರು, ಹಾವೇರಿ, ಯಲಹಂಕ, ಕಸ್ತೂರಿನಗರ, ಸಕಲೇಶಪುರ, ಕೆಜಿಎಫ್, ಚಿಂತಾಮಣಿ, ಸಾಗರ, ಗೋಕಾಕ್‌, ರಾಣೆಬೆನ್ನೂರು, ದಾಂಡೇಲಿ, ಶಿರಸಿ ಮತ್ತು ಭಾಲ್ಕಿ ನಗರಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀûಾ ಪಥಗಳನ್ನು ನಿರ್ಮಿಸಲು ರಸ್ತೆ ಸುರಕ್ಷತಾ ನಿಧಿಯ ಅನುದಾನದಿಂದ ಒಟ್ಟು 85 ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಸರ್ಕಾರ ಹೇಳಿದೆ.

ರಾಜ್ಯದೆಲ್ಲೆಡೆ ಚಾರ್ಜಿಂಗ್‌ ಸ್ಟೇಷನ್‌
ವಿದ್ಯುತ್‌ ಚಾಲಿತ ವಾಹನಗಳನ್ನು ಉತ್ತೇಜಿಸುವ ರಾಜ್ಯ ಸರ್ಕಾರದ ಇರಾದೆಗೆ ಬಜೆಟ್‌ ಪುಷ್ಟಿ ನೀಡಿದ್ದು, ಸರ್ಕಾರಿ ಕಚೇರಿಗಳು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಡಿಪೋಗಳಲ್ಲಿ ಹಸಿರು ತೆರಿಗೆ ನಿಧಿಯ ಅನುದಾನದಡಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲು ಮುಂದಾಗಿದೆ. ಜೊತೆಗೆ ಸಾರಿಗೆ ನಿಗಮಗಳಲ್ಲಿ ವಿದ್ಯುತ್‌ ಚಾಲಿತ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಲಾಗಿದೆ. ಸಾರಿಗೆ ಇಲಾಖೆಯಲ್ಲಿ ಇ-ಚಲನ್‌ ವ್ಯವಸ್ಥೆಯಡಿ ಪ್ರವರ್ತನ ಚಟುವಟಿಕೆಗಳಲ್ಲಿ ಸಂಗ್ರಹವಾದ ರಾಜಿ ದಂಡವನ್ನು ಪಾವತಿಸಿಕೊಳ್ಳುವ ವ್ಯವಸ್ಥೆ ಸದ್ಯ ರಾಜಾಜಿನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮಾತ್ರವಿದ್ದು, ಇದನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next