ಹಾನಗಲ್ಲ: ಕಾಂಗ್ರೆಸ್ ಪಕ್ಷದವರು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ಮನುಷ್ಯ ಮನಸ್ಸುಗಳ ಮಧ್ಯ ಅಶಾಂತಿ ಸೃಷ್ಟಿ ಮಾಡಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಹಾನಗಲ್ಲ ವಿಧಾನಸಭಾ ಕ್ಷೇತ್ರದ ಮಕರವಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಾತಿ ಜಾತಿಗಳ ನಡುವೆ ದ್ವೇಷವನ್ನು ಬಿತ್ತಿ, ಜಾತಿಗಳಲ್ಲಿ ನೂರಾರು ಉಪಜಾತಿಗಳನ್ನು ಸೃಷ್ಟಿಮಾಡಿ ಸಮಾಜದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ್ದಾರೆ. ಮನುಷ್ಯರು ಮನಸುಗಳ ಮಧ್ಯೆ ಗೋಡೆಯನ್ನು ಸೃಷ್ಟಿಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಆರೋಪ ಮಾಡಿದರು.
ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಹಾನಗಲ್ಲ ಅಭಿವೃದ್ಧಿಗೆ ಕೊಡುಗೆ ಶೂನ್ಯ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಕಳುಹಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ, ನಾನು ಜಲಸಂಪನ್ಮೂಲ ಸಚಿವ ಇದ್ದಾಗ ಮತ್ತು ಉದಾಸಿ ಅವರು ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದಾಗ ತಿಳವಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೇವೆ. ನಂತರದಲ್ಲಿ ಬಂದ ಕಾಂಗ್ರೆಸ್ ಸರ್ಕಾರ ಯಾವುದೇ ಕೆಲಸವನ್ನು ಮಾಡಲಿಲ್ಲ ಈ ಕ್ಷೇತ್ರಕ್ಕೆ ಕನಿಷ್ಠ ಪಕ್ಷ ಒಂದು ಸಣ್ಣ ಶಾಲೆಯನ್ನು ಸಹ ಅವರಿಂದ ಕಟ್ಟಲಾಗಿಲ್ಲ. ಸುಮಾರು 513 ಕೋಟಿ ಮೊತ್ತದ ಕಾಮಗಾರಿಗೆ ಅಡಿಗಲ್ ಹಾಕಲು ಕಾಂಗ್ರೆಸ್ ನವರು ಮುಂದಾಗಿದ್ದರು, ಆ ಅನುದಾನದಲ್ಲಿ 425 ಕೋಟಿ ಸಿಎಂ ಉದಾಸಿ ಅನುಮೋದನೆ ನೀಡಿದ್ದ ಅನುದಾನ ವಾಗಿತ್ತು. ಅಧಿಕಾರದಲ್ಲಿದ್ದಾಗ ಇಲ್ಲಿನ ಜನರನ್ನು ಇಲ್ಲಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ ಮಾಡಿದ ಕಾಂಗ್ರೆಸ್ ಪಕ್ಷ ಚಿನ್ನದ ತಟ್ಟೆಯಲ್ಲಿ ನಿಮಗೆ ಅಭಿವೃದ್ಧಿ ತೊರಿಸುವ ಸುಳ್ಳು ಆಶ್ವಾಸನೆ ಹೊತ್ತು ತಂದಿದ್ದಾರೆ.
ಎಲ್ಲೋ ಮೂಲೆಯಲ್ಲಿ ಕಾಂಗ್ರೆಸ್ ಕಿಟ್ ವಿತರಿಸಿದೆ:
ಎಲ್ಲೋ ಮೂಲೆಯಲ್ಲಿ ಕಿಟ್ ವಿತರಿಸಿ ಕೋವಿಡ್ ಸಂದರ್ಭದಲ್ಲಿ ಅದ್ಬುತವಾದ ಕೆಲಸವನ್ನು ಮಾಡಿದ್ದೇವೆ ಎಂದು ಬಿಂಬಿಸುತ್ತಿದ್ದಾರೆ. ಕೋವಿಡ್ ಸಂಕಷ್ಟವನ್ನು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮರ್ಥವಾಗಿ ಎದುರಿಸಿದ್ದೇವೆ ಸಿಎಂ ಉದಾಸಿ ಅವರ ನೇತೃತ್ವದಲ್ಲಿ 15 ಸಾವಿರಕ್ಕೂ ಹೆಚ್ಚು ಕೀಟಗಳನ್ನು ಹಾನಗಲ್ಲ ತಾಲೂಕಿನಲ್ಲಿ ವಿತರಿಸಿದ್ದೇವೆ ಎಂದು ಅವರು ಹೇಳಿದರು.
ಹಾನಗಲ್ಲನಲ್ಲಿ ಶೇ. 80ರಷ್ಟು ಮೊದಲ ಹಂತದ ಲಸಿಕೆಯನ್ನು ನೀಡಲಾಗಿದೆ. ಕೋವಿಡ್ ಸಮಯದಲ್ಲಿ ಉಚಿತವಾಗಿ ಪಡಿತರ ಹಾಗೂ ದೇಶದ ಜನತೆಗೆ ಉಚಿತವಾಗಿ ವ್ಯಾಕ್ಸಿಂಗ್ ನೀಡಿದ್ದು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರಕಾರ. ಎಂದು ಅವರು ಹೇಳಿದರು.
ನಿಮ್ಮ ಮತಕ್ಕೆ ಗೌರವವಿದೆ:
ನೀವು ನೀಡುವ ಪ್ರತಿಯೊಂದು ಮತಕ್ಕೂ ಗೌರವವಿದೆ, ಅದಕ್ಕೆ ಬೆಲೆ ಬರಬೇಕು. ನಿಮ್ಮ ಮತದ ಗೌರವವನ್ನು ಭಾರತೀಯ ಜನತಾ ಪಕ್ಷ ಕಾಪಾಡುತ್ತದೆ. ಶಿವರಾಜ್ ಸಜ್ಜನರ ಅವರರಿಗೆ ಹಾನಗಲ್ಲ ಅಭಿವೃದ್ಧಿಗೆ ಇಲ್ಲಿನ ಜನಸಾಮಾನ್ಯರ ಸೇವೆ ಮಾಡಲು ಅವಕಾಶ ನೀಡಿ ಎಂದು ಹಾನಗಲ್ಲ ಜನತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದರು.