ಬೆಂಗಳೂರು: ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಾಧಕರಿಗೆ ನಿಗದಿಪಡಿಸಲಾದ ವಯೋಮಿತಿಯನ್ನು ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ವಿವಿಧ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅವರು ಮಾತನಾಡಿದರು.
ಸಾಧನೆಗೂ ಮತ್ತು ವಯಸ್ಸಿಗೂ ಸಂಬಂಧ ಇಲ್ಲ. ಆದರೆ, ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಸಾಧಕರಿಗೆ ವಯಸ್ಸು ಮಿತಿಗೊಳಿಸಿರುವುದು ತಪ್ಪು. ಬರುವ ವರ್ಷದಿಂದ ಈ ಮಿತಿಯನ್ನು ತೆಗೆದುಹಾಕಲಾಗುವುದು ಎಂದರು.
ಅಲ್ಲದೆ, ಇದುವರೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಾಧಕರಿಂದ ಅಭಿಪ್ರಾಯ ಮತ್ತು ಅನುಭವಗಳನ್ನು ಒಳಗೊಂಡ ಮಾರ್ಗದರ್ಶಿ ಕೃತಿ ಹೊರತರಲಾಗುವುದು ಎಂದು ಮುಖ್ಯಮಂತ್ರಿ ಇದೇ ವೇಳೆ ಪ್ರಕಟಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಅಭಿಪ್ರಾಯ, ಅನುಭವಗಳನ್ನು ಕ್ರೋಢೀಕರಿಸಿ, ನಾಡಕಟ್ಟಲು ಅದನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.