ಛತ್ತೀಸ್ ಗಡ : ಕೋವಿಡ್ ಸೋಂಕಿನ ಹೊಸ ಅಲೆ ಸೃಷ್ಟಿಸುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಛತ್ತೀಸ್ ಗಡ ಸರ್ಕಾರ ಕೋವಿಡ್ ಸೋಂಕನ್ನು ಹರಡದಂತೆ ನಿರ್ವಹಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.
ರೈಲು ಅಥವಾ ವಾಯು ಮಾರ್ಗದಲ್ಲಿ ಇತರ ರಾಜ್ಯಗಳಿಂದ ಛತ್ತೀಸ್ ಗಡಕ್ಕೆ ಬರುವ ಪ್ರಯಾಣಿಕರಿಂದ 72 ಗಂಟೆಗಳೊಳಗಿನ ಕೋವಿಡ್-19 ಆರ್ ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವೀಡಿಯೊ ಕಾನ್ಫರೆನ್ಸ್ ನಲ್ಲಿ ವೈದ್ಯಾಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಭೂಪೇಶ್, ನೆಗೆಟಿವ್ ವರದಿಗಳನ್ನು ಹೊಂದದೆ ಪರ ರಾಜ್ಯಗಳಿಂದ ರೈಲು ಹಾಗೂ ವಾಯು ಮಾರ್ಗಗಳ ಮೂಲಕ ಬರುವ ಪ್ರಯಾಣಿಕರನ್ನು ಕ್ವಾರಂಟೈನ್ ನಲ್ಲಿ ಇರಿಸಲು ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದಾರೆ.
ಓದಿ : ಮುಂಬಯಿ : ಆಸ್ಪತ್ರೆಗಳಲ್ಲಿ ಕೋವಿಡ್ ಪೀಡಿತರು: ಆಮ್ಲಜನಕ ಸಿಲಿಂಡರ್‌ಗಳ ಕೊರತೆ
ಹೆಚ್ಚಳವಾಗುತ್ತಿರುವ ಕೋವಿಡ್ ಸೋಂಕಿನ ಕಾರಣದಿಂದಾಗಿ ರಾಜ್ಯ ಆತಂಕದ ಸ್ಥಿತಿಯಲ್ಲಿದೆ. ಕೋವಿಡ್ ನನ್ನು ನಾವು ಯೋಜಿತ ಮಾರ್ಗದಲ್ಲಿ ಎದುರಿಸಿದಾಗ ಮಾತ್ರ ರಾಜ್ಯ ಕೋವಿಡ್ ಮುಕ್ತವಾಗುವುದಕ್ಕೆ ಸಾಧ್ಯವಿದೆ. ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರವನ್ನು ವಹಿಸುವುದು ಅಗತ್ಯ. ಹೊರ ರಾಜ್ಯಗಳಿಂದ ಬರುವವರನ್ನು ಕೋವಿಡ್ ಪರೀಕ್ಷೆ ಮಾಡಬೇಕು. ಸೋಂಕು ಕಾಣಿಸಿಕೊಂಡವರನ್ನು ಕೋವಿಡ್ ಸೆಂಟರ್ ನಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿ ಇರಿಸಬೇಕು ಎಂದು ಅವರು ಅಧಿಕಾರಿಗಳಿಗೆ ಹೇಳಿದ್ದಾರೆ.
ಇನ್ನು ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲೂ ಕೂಡ ಸೋಂಕು ಹರಡುತ್ತಿದೆ. ಇದನ್ನು ತಡೆಗಟ್ಟಲು, ರಾಜ್ಯದ ಹೊರಗಿನಿಂದ ಬರುವವರನ್ನು ಪರೀಕ್ಷಿಗೆ ಒಳಪಡಿಸುವುದು ಅವಶ್ಯಕ. ಹಳ್ಳಿಗಳಲ್ಲಿ ಕೋವಿಡ್ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ಸೂಚನೆ ನೀಡಿದೆ “ಎಂದು ಅವರು ಹೇಳಿದ್ದಾರೆ.
ಓದಿ : ಪರಲೋಕದ ಮುಕ್ತಿದಾತರ ಇಹಲೋಕದ ಬವಣೆ : ರುದ್ರಭೂಮಿ ನೌಕರರಿಗೆ 10 ತಿಂಗಳಿಂದ ವೇತನವಿಲ್ಲ