ದಾವಣಗೆರೆ : ಸುರಕ್ಷತೆ ವಿಚಾರದಲ್ಲಿ ರಾಜ್ಯ ಯಾವುದೇ ರಾಜಿ ಮಾಡಿಕೊಳ್ಳಲ್ಲ. ಉಗ್ರರು ರಾಜ್ಯದಲ್ಲಿ ಬೇರು ಬಿಡಲು ಅವಕಾಶ ನೀಡದೆ ಹೋರಾಡಿ ಸದೆಬಡಿದಿದ್ದೇವೆ. ಅಂಥ ಉಗ್ರ ಸಂಘಟನೆಗಳನ್ನು ಪತ್ತೆ ಹಚ್ಚಿಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಜಿಎಂಐಟಿ ಕಾಲೇಜು ಆವರಣದಲ್ಲಿ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಪರಾಧ ತಡೆಯಲು ಅಮಿತ್ ಶಾ ಅವರು ಕಳೆದ ಬಾರಿ ಬಂದಾಗ ಸೂಚಿಸಿದ ಎರಡು ಸಲಹೆಗಳನ್ನು (ಸಂಚಾರಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಹಾಗೂ ವಿಶೇಶಾಧಿಕಾರಿಗಳ ನಿಗಾ ವಹಿಸುವಿಕೆ) ರಾಜ್ಯ ಗೃಹ ಇಲಾಖೆ ಪಾಲಿಸಿದೆ.
ಪೊಲೀಸ್ ಶಾಲೆಗಳಲ್ಲಿ ಮಿಲಿಟರಿ ಮಾದರಿಯಲ್ಲಿ ಗುಣಮಟ್ಟದ ಶಿಸ್ತಿನ ಶಿಕ್ಷಣನೀಡಲಾಗುತ್ತಿದೆ. ಗಾಂಧಿ ನಾಡಿನವರಾದ ಅಮಿತ್ ಶಾ ಅವರ ಕೈಯಿಂದಲೇ ನಗರದಲ್ಲಿ ನಿರ್ಮಾಣಗೊಂಡ ಗಾಂಧಿ ಭವನ ಉದ್ಘಾಟನೆಯಾಗಿರುವುದು ರಾಜ್ಯದ ಜನರ ಯೋಗಾಯೋಗ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೊಡುಗೆ ದೇಶದ ಇತಿಹಾಸದಲ್ಲಿ ಅವಿಸ್ಮರಣೀಯವಾಗಲಿದೆ. ಭಾರತ ದೇಶದ ಸಮಗ್ರತೆ, ಏಕತೆ, ಅಖಂಡತೆಗೆ ದುಡಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬಳಿಕ ಅಮಿತ್ ಶಾ ದಿಟ್ಟ ಹಾಗೂ ಗಟ್ಟಿ ನಿರ್ಧಾರ ಕೈಗೊಂಡು ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿದ್ದ 370ನೇ ವಿಧಿ ರದ್ದುಪಡಿಸಿದ್ದಾರೆ. ಜಮ್ಮು-ಕಾಶ್ಮೀರವನ್ನು ದೇಶದ ಅಖಂಡತೆಗೆ, ಸಮಗ್ರತೆಗೆ ಸೇರಿಸಿ ದಿಟ್ಟತನ ಪ್ರದರ್ಶಿಸಿದ್ದಾರೆ ಎಂದರು.
ಇಂದು ಅಪಘಾನಿಸ್ತಾನದಲ್ಲಿ ಜನರ ಮಾನ-ಪ್ರಾಣ ಸಂಕಷ್ಟಕ್ಕೆ ಸಿಲುಕಿದೆ. ವಿಶೇಷವಾಗಿ ಮಹಿಳೆ, ಮಕ್ಕಳು ಆತಂಕದಲ್ಲಿದ್ದಾರೆ. ಇಂಥ ಆತಂಕದ ಸ್ಥಿತಿ ನಮ್ಮ ದೇಶದಲ್ಲಿ ಬರಬಾರದೆಂದು ಅಮಿತ್ ಶಾ ಅವರು ಗೃಹ ಸಚಿವರಾದ ಮೇಲೆ ಜಮ್ಮು-ಕಾಶ್ಮೀರದಲ್ಲಿದ್ದ 370ನೇ ವಿಧಿ ತೆಗೆಯುವ ನಿರ್ಣಯ ಕೈಗೊಂಡರು. ಜಮ್ಮು-ಕಾಶ್ಮೀರವನ್ನು ಭಾರತದಲ್ಲಿ ಸಂಪೂರ್ಣ ಸೇರಿಸಿ ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕಾರಣೀಕರ್ತರಾದರು. ಹೀಗಾಗಿ ಅವರ ಕಾರ್ಯ ಇತಿಹಾಸದ ಪುಟ ಸೇರಿದೆ ಎಂದು ಬಣ್ಣಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿವರಾದ ಆರಗ ಜ್ಞಾನೇಂದ್ರ, ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ, ಆನಂದ್ ಸಿಂಗ್, ಬೈರತಿ ಬಸವರಾಜ್, ಸಂಸದ ಡಾ|ಜಿ. ಎಂ. ಸಿದ್ದೇಶ್ವರ, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಎಸ್.ವಿ. ರಾಮಚಂದ್ರ, ಜಿ.ಕರುಣಾಕರ ರೆಡ್ಡಿ, ಪ್ರೊ| ಎನ್. ಲಿಂಗಣ್ಣ, ಕೊಂಡಜ್ಜಿ ಮೋಹನ್ ಇದ್ದರು.