Advertisement
ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನ ಎ. 30ರಂದು ನಡೆಯಲಿದ್ದು, ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸದಿಲ್ಲಿಗೆ ತೆರಳಲಿದ್ದಾರೆ. ಇದರ ನಡುವೆಯೇ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ಪುನಾರಚನೆಯ ಕುರಿತು ಚರ್ಚಿಸುವ ಸಾಧ್ಯತೆ ಎಂಬ ನಿರೀಕ್ಷೆಯಲ್ಲಿ ಆಕಾಂಕ್ಷಿಗಳಿದ್ದಾರೆ.
Related Articles
Advertisement
ಬಿಜೆಪಿ ಪಕ್ಷದ ಮೂಲಗಳ ಪ್ರಕಾರ ಮೇ ಮೊದಲ ವಾರದಲ್ಲಿ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದ್ದು, ಖಾಲಿ ಇರುವ ಐದು ಸ್ಥಾನಗಳ ಜತೆಗೆ ನಾಲ್ಕರಿಂದ ಐದು ಹಿರಿಯ ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
ವಿಧಾನಸಭೆ ಚುನಾವಣೆಗೆ ಒಂದು ವರ್ಷ ಇರುವುದರಿಂದ 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ತಲುಪಿಸುವ ಅಗತ್ಯವಿದ್ದು, ಅದಕ್ಕಾಗಿ ಸಕ್ರಿಯರಾಗಿರುವ ಯುವ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ವರಿಷ್ಠರ ಪಟ್ಟಿ :
ಹಾಲಿ ಸಚಿವರ ಕಾರ್ಯವೈಖರಿ ಹಾಗೂ ಪಕ್ಷ ಮತ್ತು ಸರಕಾರದ ಮಟ್ಟದಲ್ಲಿ ಅವರು ಮಾಡಿರುವ ಕೆಲಸಗಳು ಮತ್ತು ಅವರ ವರ್ಚಸ್ಸಿನ ಬಗ್ಗೆ ವರಿಷ್ಠರು ತಮ್ಮದೇ ಆದ ತಂಡದಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇದರ ಆಧಾರದಲ್ಲಿಯೇ ಯಾರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಯಾರನ್ನು ಸಂಪುಟಕ್ಕೆ ಸೇರಿಸಬೇಕು ಎಂದು ವರಿಷ್ಠ ನಾಯಕರೇ ಪಟ್ಟಿ ಸಿದ್ಧಪಡಿಸಲಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ವರಿಷ್ಠರು ಸೂಚನೆ ನೀಡಿದಾಗ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವುದಾಗಿ ಸಿಎಂ ಹೇಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಎ. 30ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನದಲ್ಲಿ ಭಾಗವಹಿಸಲು ಶುಕ್ರವಾರ ರಾತ್ರಿ ಹೊಸದಿಲ್ಲಿಗೆ ತೆರಳಲಿದ್ದೇನೆ. ಸಂಪುಟ ಪುನಾರಚನೆ ಕುರಿತು ವರಿಷ್ಠರನ್ನು ಭೇಟಿಯಾಗಲು ಸಮಯ ಕೇಳಿಲ್ಲ.-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ