ಬೆಂಗಳೂರು: ಸರ್ವಪಕ್ಷ ನಾಯಕರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮೇಕೆದಾಟು ಹಾಗೂ ಇತರ ವಿಚಾರಗಳ ಕುರಿತು ಸುದೀರ್ಘ ಚರ್ಚೆ ಆಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಬಳಿ ಡಿಪಿಆರ್ ಇದೆ. ಇದರ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸರ್ವಪಕ್ಷಗಳ ನಾಯಕರ ಸಭೆ ಬಳಿಕ ಸಿಎಂ ಸುದ್ದಿಗೋಷ್ಟಿಯಲ್ಲಿ ಮಾತಾನಾಡಿದ ಅವರು, ಪ್ರಾಧಿಕಾರದ ಪ್ರೊಸೀಡಿಂಗ್ಸ್ ನಲ್ಲಿ ಏನೆಲ್ಲ ಚರ್ಚೆ ಆಗಿದೆ ಅಂತ ಮಾಹಿತಿ ಕೇಳಿದ್ದೇವೆ. ಕೇಂದ್ರದ ಪರಿಸರ ಇಲಾಖೆಯಿಂದಲೂ ಯೋಜನೆಗೆ ಅನುಮತಿ ಸಿಗಬೇಕಿದೆ. ಮುಂದಿನ ಸೋಮವಾರ ಅಥವಾ ಮಂಗಳವಾರ ದೆಹಲಿಗೆ ಗೋವಿಂದ ಕಾರಜೋಳ ಪ್ರಯಾಣ ಮಾಡಲಿದ್ದು ಕೇಂದ್ರದ ಬಳಿ ಕಾರಜೋಳ ಅವರು ಇವತ್ತಿನ ಸಭೆ ಬಗ್ಗೆ ಮಾಹಿತಿ ತಿಳಿಸುತ್ತಾರೆ ಎಂದು ಹೇಳಿದರು.
ಇದೆಲ್ಲ ಆದ ಬಳಿಕ ಅಗತ್ಯವಾದರೆ ಸರ್ವಪಕ್ಷ ನಾಯಕರ ನಿಯೋಗ ಅಗತ್ಯ ಕಂಡುಬಂದರೆ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯುತ್ತೇವೆ. ನಾನು ಅಧಿವೇಶನ ಮುಗಿದ ಬಳಿಕ ದೆಹಲಿಗೆ ಹೋಗುತ್ತೇನೆ ಕೇಂದ್ರದ ಸಚಿವರ ಜತೆ ಎಲ್ಲ ಜಲವಿವಾದಗಳ ಬಗ್ಗೆಯೂ ಚರ್ಚೆ ನಡೆಸುತ್ತೇನೆ ಎಂದರು.
ಮೇಕೆದಾಟು ಯೋಜನೆಗೆ ಆದಷ್ಟು ಬೇಗ ಪರಿಸರ ಇಲಾಖೆ ಅನುಮತಿ ಸಿಗುವ ವಿಶ್ವಾಸ ಇದೆ. ಜಲಯೋಜನೆಗಳಿಗೆ ವೇಗ ಕೊಡುವ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ಈ ಬಗ್ಗೆ ಕೇಂದ್ರದ ಜತೆ ಚರ್ಚೆ ನಡೆಸುತ್ತೇವೆ ಎಂದರು.
ಸಭೆಯಲ್ಲಿ ಅಂತರಾಜ್ಯ ನದಿ ಜೋಡಣೆ ಬಗ್ಗೆಯೂ ಚರ್ಚೆ ಆಗಿದೆ. ನಮ್ಮ ರಾಜ್ಯದ ಪಾಲು ಪಡೆದ ಬಳಿಕ ನದಿ ಜೋಡಣೆಗೆ ಒಪ್ಪುತ್ತೇವೆ. ಈ ನಿಲುವು ನಮ್ಮದಾಗಿದೆ ಇದನ್ನೇ ನಿಲುವು ಕೇಂದ್ರದ ಎದುರು ಇಡುತ್ತೇವೆ ನದಿ ಜೋಡಣೆ ಯೋಜನೆಯ ತಾಂತ್ರಿಕ ಅಂಶಗಳನ್ನು ಕೇಂದ್ರದಿಂದ ಆದಷ್ಟು ಬೇಗ ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.