ಬೀದರ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರ ನೇತೃತ್ವದಲ್ಲಿ ಅನುಭವ ಮಂಟಪ ನಿರ್ಮಾಣ ಕುರಿತಂತೆ ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ಸಭೆ ನಡೆಯಿತು.
ಅನುಭವ ಮಂಟಪವು ಕಲ್ಯಾಣ ಕರ್ನಾಟಕ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದು, ಈ ಕಾಮಗಾರಿಗೆ ಎದುರಾಗಿರುವ ಎಲ್ಲ ತೊಡಕುಗಳನ್ನು ನಿವಾರಿಸಿ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಬೇಗ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಅವರು ಮಾತನಾಡಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅನುಭವ ಮಂಟಪಕ್ಕೆ ಅನುದಾನ ಬಿಡುಗಡೆ ಮಾಡಿ, ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಗತ್ತಿಗೆ ಸಂಸತ್ತಿನ ಪರಿಕಲ್ಪನೆಯನ್ನು ಪರಿಚಯಿಸಿದ ಮಹಾನ್ ಸಾಮಾಜಿಕ ಹರಿಕಾರರು. ಅವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸುವುದರಿಂದ ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜೊತೆಗೆ ಈ ಭಾಗದಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಸಾಕಷ್ಟು ಬೆಳವಣಿಗೆಯಾಗಲಿದೆ. ಹಾಗಾಗಿ ಈ ಕಾಮಗಾರಿಯನ್ನು ಶೀಘ್ರ ಆರಂಭಿಸುವ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ : ದೋಟಿಹಾಳ : ಆಶ್ರಯ ಮನೆ ಹಂಚಿಕೆ ವೇಳೆ ನಡೆದ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿತು
ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಪ್ರಮುಖರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.