ಶಿಗ್ಗಾವಿ: ಮುಖ್ಯಮಂತ್ರಿಯಾಗಿ ನಿಮ್ಮ ಮತಕ್ಕೆ ಗೌರವ ತಂದಿದ್ದೇನೆ ಹೊರತು ಚ್ಯುತಿ ತರುವ ಕೆಲಸ ಮಾಡಿಲ್ಲ. ಶಿಗ್ಗಾವಿಗೆ ಮುಂದಿನ ದಿನಗಳಲ್ಲಿ ಭವ್ಯ ಭವಿಷ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಗಂಜೀಗಟ್ಟಿಯಲ್ಲಿ ನಡೆಯುತ್ತಿರುವ ಶ್ರೀ ದ್ಯಾಮವ್ವದೇವಿ ಜಾತ್ರಾಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಗ್ಗಾವಿ ಸಮಗ್ರ ಅಭಿವೃದ್ಧಿ ಯಾವ ರೀತಿ ಆಗುತ್ತಿದೆ ಎಂಬುದನ್ನು ನೋಡಿದ್ದಿರಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಬೇಕಿದೆ. ನಿಮ್ಮ ಆಶೀರ್ವಾದದಲ್ಲಿ ದೊಡ್ಡ ಶಕ್ತಿಯಿದೆ. ಜೀವನದ ಕೊನೆ ಉಸಿರು ಇರುವವರೆಗೆ ನಿಮ್ಮ ಸೇವೆ ಮಾಡುತ್ತೇನೆ. ಈ ಭಾಗದ ಜನರು ದೈವಿಭಕ್ತರು, ಪ್ರಾಮಾಣಿಕರು ಭಕ್ತಿ ಭಾವದಿಂದ ಈ ಜಾತ್ರೆ ಆಚರಣೆ ಮಾಡಿಕೊಂಡು ಬಂದಿದ್ದಿರಿ. ಈ ದ್ಯಾಮವ್ವದೇವಿಯನ್ನ ಆರಾಧಿಸುವವರಿಗೆ ದೇವಿ ಆಶೀರ್ವಾದ ಮಾಡುತ್ತಾಳೆ. ನಾನು ನಿತ್ಯ ಪೂಜೆಯಲ್ಲಿ ತಾಯಿ ದ್ಯಾಮವ್ವದೇವಿಯನ್ನ ನೆನೆಸುತ್ತೇನೆ ಎಂದು ಹೇಳಿದರು.
ನೀವೆಲ್ಲರು ಗ್ರಾಮ ದೇವತೆಯ ಸ್ವರೂಪವಾಗಿದ್ದು, ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ರಾಜ್ಯದಲ್ಲಿ 3 ಲಕ್ಷ ಮಹಿಳೆಯರಿಗೆ ಉದ್ಯೋಗ ಕೊಡುವ 500 ಕೋಟಿ ಯೋಜನೆ ಮಾಡಿದ್ದೇನೆ. ಶಾಲಾ ಮಕ್ಕಳಿಗೆ ಫ್ರೀ ಬಸ್ ಪಾಸ್ ಕೊಡುವ ಯೋಜನೆ ಮಾಡಿದ್ದೇವೆ. ರಾಜ್ಯದ ಮಹಿಳೆಯರಿಗೆ ಅನುಕೂಲ ಮಾಡುವ ಕೆಲಸ ಮಾಡಿದ್ದೇನೆ. ಇದೆಲ್ಲ ಶಿಗ್ಗಾವಿ ಮಹಿಳೆಯರು ನನಗೆ ಆಶೀರ್ವಾದ ಮಾಡಿದ್ದರಿಂದ ಸಾಧ್ಯವಾಗಿದೆ. ದುಡಿಯುವ ವರ್ಗಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ ಇದರ ಎರಡು ಪಟ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶಿಗ್ಗಾವಿ ಸವಣೂರು ಭಾಗದ ರೈತರಿಗೆ ಇವತ್ತು 94 ಕೋಟಿ ಬೆಳೆವಿಮೆ ಬಿಡುಗಡೆಯಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆವಿಮೆ ಬಂದಿದ್ದು ಇದೆ ಮೊದಲು ಎಂದು ಹೇಳಿದರು.
ಕೇಂದ್ರ ಕಲ್ಲಿದ್ದಲು ಹಾಗೂ ಗಣಿಗಾರಿಕೆ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಚರಾಚರ ವಸ್ತುವಿನಲ್ಲಿ ದೇವಿಯನ್ನ ಕಾಣುವಂತದ್ದು ಭಾರತೀಯ ಸಂಸ್ಕೃತಿಯಾಗಿದ್ದು, ಜಾತ್ರೆಗಳಿಂದ ನಮ್ಮ ಸಂಸ್ಕಾರ ಉಳಿದಿದೆ. ನಾವು ಬ್ರಿಟಿಷ್ ಶಿಕ್ಷಣ ಪಡೆದು ಅಕ್ಷರಾಭ್ಯಾಸ ಕಲಿತಿದ್ದೇವೆ. ಆದರೆ ಸುಸಂಸ್ಕೃತರಾಗಲಿಲ್ಲ. ಇಂದಿನ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಸಂಸ್ಕಾರ ಸಿಗುತ್ತಿಲ್ಲ. ಮನೆಯಲ್ಲಿ ತಾಯಂದಿರಿಂದ, ಹೊರಗಡೆ ಜಾತ್ರೆ ಆಚರಣೆಗಳಿಂದ ಮಾತ್ರ ಸಂಸ್ಕಾರ ಸಿಗುತ್ತಿದೆ ಎಂದು ಹೇಳಿದರು.
ಮುಂದಿನ ಮೂರು ವರ್ಷಗಳಲ್ಲಿ ಭಾರತ ಟಾಪ್ ತ್ರೀ ದೇಶಗಳಲ್ಲಿ ಒಂದಾಗಲಿದೆ. ನಿಜಲಿಂಗಪ್ಪನವರ ನಂತರ ದೊಡ್ಡ ನಾಯಕನಾಗಿ ಸಿಎಂ ಬಸವರಾಜ ಬೊಮ್ಮಾಯಿಯವರು ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ ಸೇರಿದಂತೆ ಇತರರು ಇದ್ದರು.