ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಒಂದು ವರ್ಷದ ಜನೋತ್ಸವ ಕಾರ್ಯಕ್ರಮವನ್ನು ಮುಂದೂಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬುಧವಾರ ಮಧ್ಯರಾತ್ರಿ ಆರ್ ಟಿ ನಗರದ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ. ಸಿಎಂ ಬೊಮ್ಮಾಯಿ, ನನಗೆ ನಿನ್ನೆ ರಾತ್ರಿ ಪ್ರವೀಣನ ಹತ್ಯೆ ಸುದ್ದಿ ಬಂದಾಗ ಬಹಳ ಸಂಕಟ ನೋವು ಉಂಟಾಯಿತು. ಒಬ್ಬ ಅತ್ಯಂತ ಅಮಾಯಕನ ಯೋಜನಾ ಬದ್ದವಾಗಿ ಕೊಲೆಯಾಗಿರುವುದು ಅಮಾನವೀಯ. ನಮ್ಮೆಲ್ಲರ ಮನದಲ್ಲಿ ಆಕ್ರೋಶ ಇದೆ. ಹರ್ಷನ ಕೊಲೆ ಆದ ಕೆಲವೇ ದಿನಗಳಲ್ಲಿ ಈ ಪ್ರಕರಣ ಆಗಿರುವುದು ನೋವು ತಂದಿದೆ. ಈ ಸಂದರ್ಭದಲ್ಲಿ ನಮ್ಮ ಪಕ್ಷದ ಅಧ್ಯಕ್ಷರು ಹೋಗಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ನಮ್ಮ ಪಕ್ಷದ ಕಾರ್ಯಕರ್ತನ ಕೊಲೆಯಾಗಿದೆ. ಜನಪರವಾಗಿ ನಾವು ಮಾಡಿರುವ ಕೆಲಸದ ಬಗ್ಗೆ.ಜನರಿಗೆ ಆತ್ಮವಿಶ್ವಾಸ ತುಂಬಲು ಜನೋತ್ಸವ ಮಾಡಲು ಸಂಭ್ರಮಿಸಲು ಆಯೊಜನೆ ಮಾಡಿದ್ದೇವು. ನಾನು ಆ ಹುಡುಗನ ತಾಯಿಯ ಆಕ್ರಂದನ ನೋಡಿದೆ. ಹೀಗಾಗಿ ನಾಳೆ ದೊಡ್ಡ ಬಳ್ಳಾಪುರ ಕಾರ್ಯಕ್ರಮವನ್ನು ರದ್ದು ಮಾಡಿದ್ದೇವೆ. ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಯಾವುದೇ ಕಾರ್ಯಕ್ರಮ ಇರುವುದಿಲ್ಲ. ಕಾರ್ಯಕ್ರಮಕ್ಕೆ ಬರುವ ಜನರ ಕ್ಷಮೆ ಕೋರುತ್ತೇನೆ. ಈ ಬಾರಿ ಆ ಭಾಗದಲ್ಲಿ ಹೆಚ್ಚಿನ ರಾಜಕೀಯ ಬೆಂಬಲ ದೊರೆಯು ನಿರೀಕ್ಷೆ ಇತ್ತು. ಜನರ ಕ್ಷಮೆ ಕೋರುತ್ತೇನೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 22 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಅಲ್ಲದೇ ಅನೇಕರ ಮೇಲೆ ಇದ್ದ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು. ಈ ಪ್ರಕರಣವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಕೇರಳ ಹೈಕೋರ್ಟ್ ಒಂದು ಆದೇಶ ನೀಡಿದೆ. ರಾಜ್ಯದಲ್ಲಿ ಆಂಟಿ ಟೆರರಿಸ್ಟ್ ಕಮಾಂಡೊ ಪಡೆಯನ್ನು ರಚಿಸಲು ತೀರ್ಮಾನಿಸಲಾಗಿದೆ.
ನಮಗೆ ನನ್ನ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಜೀವ ಮುಖ್ಯ ಅಷ್ಟೇ ಅಲ್ಲದೇ ಸಾಮನ್ಯ ಪ್ರಜೆಯ ಜೀವ ಮುಖ್ಯ. ಅಮಾಯಕನ ಜೀವ ಪಡೆಯುವವರ ಪಾಪದ ಕೊಡ ತುಂಬಿದೆ. ನಾನು ಯುವ ಜನತೆಯ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ ಅವರ ಭಾವನೆಗೆ ತಕ್ಕಂತೆ ಕ್ರಮ ಆಗುತ್ತದೆ.
ನಾನು ಗೃಹ ಸಚಿವನಾಗಿದ್ದಾಗ 15 ಕ್ಕೂ ಹೆಚ್ಚು ಜನರನ್ನು ತಿಹಾರ್ ಜೈಲಿಗೆ ಕಳುಹಿಸಿದ್ದೇನೆ. ಇದನ್ನು ಮಟ್ಟ ಹಾಕಲು ನಮಗೆ ಶಕ್ತಿ ಇದೆ. ಹೀಗಾಗಿ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದು ಅಂತಾರಾಜ್ಯ ಪ್ರಕರಣ ಆಗಿದೆ. ಈ ಸಂದರ್ಭದಲ್ಲಿ ಏನೇ ಹೇಳಿದರೂ ತನಿಖೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈಗ ಏನೂ ಹೇಳುವುದಿಲ್ಲ.
ಪಿಎಫ್ ಐ ಸಂಘಟನೆಯನ್ನು ಬ್ಯಾನ್ ಮಾಡುವ ಬಗ್ಗೆ ಎಲ್ಲ ರಾಜ್ಯಗಳ ಒಪ್ಪಿಗೆ ಪಡೆದು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.