Advertisement

“ಎ. 27ರ ಬಳಿಕ ಕೋವಿಡ್‌ ಮಾರ್ಗಸೂಚಿ’ : ಬೊಮ್ಮಾಯಿ

12:19 AM Apr 25, 2022 | Team Udayavani |

ಹುಬ್ಬಳ್ಳಿ : ಕೊರೊನಾ ನಾಲ್ಕನೇ ಅಲೆ ಬಗ್ಗೆ ಜಾಗೃತವಾಗಿರಬೇಕೆಂದು ಕೇಂದ್ರ ಸರಕಾರ ಈಗಾಗಲೇ ಸೂಚಿಸಿದೆ. ಎ. 27ರಂದು ಪ್ರಧಾನಿ ಮೋದಿ ದೇಶದಲ್ಲಿನ ಕೋವಿಡ್‌ ಪರಿಸ್ಥಿತಿ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ನಡೆಸಲಿದ್ದಾರೆ. ಅವರೊಂದಿಗಿನ ಸಂವಾದದ ಅನಂತರ ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆ ಹಾಗೂ ಮಾರ್ಗಸೂಚಿ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಳೆದ 8-10 ದಿನಗಳಿಂದ ಅಲ್ಪಮಟ್ಟದ ಪ್ರಕರಣಗಳು ಕಂಡು ಬಂದಿವೆ. ಹಿಂದಿನ ಮೂರು ಅಲೆಗಳನ್ನು ನಿಭಾಯಿಸಿರುವ ಅನುಭವದಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಸೂಕ್ತ ಎಂದು ಪರಿಣಿತರು ಹೇಳಿದ್ದಾರೆ. ಈಗಾಗಲೇ ಆರೋಗ್ಯ ಸಚಿವ ಸುಧಾಕರ್‌ ಅವರು ಹಲವು ಸೂಚನೆಗಳನ್ನು ನೀಡಿದ್ದಾರೆ.

ಎ. 27ರಂದು ಪ್ರಧಾನಿ ಮೋದಿ ಜತೆ ವೀಡಿಯೋ ಸಂವಾದದ ಅನಂತರ ಈ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗುವುದು. ಜನರು ಜಾಗೃತರಾಗಿರುವುದು ಬಹಳ ಮುಖ್ಯ. ಕೋವಿಡ್‌ 2ನೇ ಅಲೆ ಬಂದಾಗ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪ್ರಾರಂಭವಾಗಿ ಅನಂತರ ಉಲ್ಬಣವಾಗಿತ್ತು. ಈಗಾಗಲೇ ವಿಜ್ಞಾನಿಗಳು ಸಹ ಒಮ್ರಿಕಾನ್‌ ಯಾವ ಮಾದರಿಯಲ್ಲಿದೆ ಎಂದು ಪರೀಕ್ಷಿಸುತ್ತಿದ್ದಾರೆ. ಎ. 27ರ ಅನಂತರ ಒಂದು ಶಿಷ್ಟಾಚಾರ ಸಿದ್ಧಪಡಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next