ಬೆಂಗಳೂರು: ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಕೃಷ್ಣಾ ನದಿ ಪ್ರವಾಹದಿಂದಾಗಿ ಉದ್ಭವಿಸಿರುವ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಸಂಬಂಧವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ತಮ್ಮ ಗೃಹ ಕಛೇರಿ ಕೃಷ್ಣಾದಲ್ಲಿ ಐದು ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಸಂವಾದ ನಡೆಸಿದರು.
ಪ್ರವಾಹ ಪೀಡಿತ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ ಮತ್ತು ರಾಯಚೂರು ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಿದ ಮುಖ್ಯಮಂತ್ರಿ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದರು. ನೆರೆ ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಜೊತೆಗೆ ನೆರೆ ಪೀಡಿತರಿಗೆ ಅಗತ್ಯ ಮೂಲಸೌಕರ್ಯವನ್ನು ಒದಗಿಸುವಂತೆಯೂ ಸಹ ಮುಖ್ಯಮಂತ್ರಿಯವರು ಸೂಚನೆಗಳನ್ನು ನೀಡಿದರು.
ಇನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳ ರಕ್ಷಣೆಗೂ ಆದ್ಯತೆ ನೀಡುವಂತೆ ಸಿ.ಎಂ. ಸೂಚನೆ ನೀಡಿದರು. ಪರಿಹಾರ ಕಾರ್ಯಗಳನ್ನು ನಡೆಸಲು ಹಣಕಾಸಿನ ಕೊರತೆಯ ನೆಪವನ್ನು ಒಡ್ಡದಂತೆಯೂ ಸಹ ಯಡಿಯೂರಪ್ಪ ಸಂಬಂಧಿತ ಜಿಲ್ಲಾಡಳಿತಗಳಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದರು. ಇನ್ನು ನೆರೆ ಸಂತ್ರಸ್ತ ಶಿಬಿರಗಳಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸುವಂತೆಯೂ ಸಿಎಂ ಸೂಚನೆ ನೀಡಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಮತ್ತು ಪ್ರವಾಹದಿಂದ ಉಂಟಾಗಿರುವ ಬೆಳೆಹಾನಿ ಸಂಬಂಧಿತ ಮಾಹಿತಿಯನ್ನು ಶೀಘ್ರದಲ್ಲೇ ಕಳುಹಿಸುವಂತೆ ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ತಾಕೀತು ಮಾಡಿದರು.
ಉತ್ತರ ಕರ್ನಾಟಕ ಭಾಗದ ಪ್ರವಾಹ ಪೀಡಿತ ಜಿಲ್ಲೆಯ ಪ್ರದೇಶಗಳಿಗೆ ಸೋಮವಾರ ಖುದ್ದು ಭೇಟಿ ನೀಡಿ ವೈಮಾನಿಕ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ಪರಿಹಾರ ಕಾರ್ಯಗಳಿಗೆ ಹಣಕಾಸಿನ ಲಭ್ಯತೆ ವಿವರ:
ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 11.42 ಕೋಟಿ ರೂ. , ವಿಜಯಪುರ ಜಿಲ್ಲೆಯಲ್ಲಿ ಪಿ.ಡಿ. ಖಾತೆಯಲ್ಲಿ 9.10 ಕೋಟಿ ರೂ. , ಬಾಗಲಕೋಟೆ ಜಿಲ್ಲೆಯಲ್ಲಿ ಪಿ.ಡಿ. ಖಾತೆಯಲ್ಲಿ 10.55 ಕೋಟಿ ರೂ. , ರಾಯಚೂರು ಜಿಲ್ಲೆಯಲ್ಲಿ ಪಿ.ಡಿ. ಖಾತೆಯಲ್ಲಿ 13.02 ಕೋಟಿ ರೂ. ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಪಿ.ಡಿ. ಖಾತೆಯಲ್ಲಿ 10.29 ಕೋಟಿ ರೂ. ಅನುದಾನ ಲಭ್ಯವಿದೆ.