ಬಳ್ಳಾರಿ: ಸಿಎಂ ಆಡಿಯೋ ಬಗ್ಗೆ ನಾನು ಹೇಳುವಂಥದ್ದು ಏನೂ ಇಲ್ಲ. ಅದು ಮುಗಿದ ಅಧ್ಯಾಯ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಡಿಸಿ ಕಚೇರಿ ಆವರಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಆಡಿಯೋ ಪ್ರಕರಣ ಮುಗಿದ ಅಧ್ಯಾಯ. ಅದರ ಬಗ್ಗೆ ನಾನು ಹೇಳುವುದು ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾತನಾಡುವುದು ಸಹಜ. ಅದಕ್ಕೆ ನಾವು ಪ್ರತಿಕ್ರಿಯಿಸುತ್ತೇವೆ ಎಂದು ತಿಳಿಸಿದರು.
ಪಕ್ಷದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಇದ್ದೇವೆ. ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮಾಜಿ ಪ್ರಧಾನಿ ದೇವೇಗೌಡರು ಹಿರಿಯ ನಾಯಕರು. ಸಿಎಂ ಜೊತೆ ಔಪಚಾರಿಕವಾಗಿ ಮಾತಾಡಿರಬಹುದು. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ನಮ್ಮ ಸರ್ಕಾರಕ್ಕೆ ಸಲಹೆ ನೀಡಬಹುದು ಎಂದು ತಿಳಿಸಿದರು.
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಆದಾಯ ಹೆಚ್ಚಿರುವ 190 ಎ ಗ್ರೇಡ್ ದೇವಸ್ಥಾನಗಳು ಇವೆ. ಈ ದೇವಸ್ಥಾನಗಳಲ್ಕಿ ಸಾಮೂಹಿಕ ವಿವಾಹ ಮಾಡುವ ಕುರಿತು ಚಿಂತನೆ ಇದ್ದು, ಕೆಲವೇ ದಿನಗಳಲ್ಲಿ ಆದೇಶ ಹೊರಡಿಸಲಾಗುತ್ತದೆ. ಕನಿಷ್ಠ 1000 ಸಾವಿರ ಮದುವೆ ಮಾಡುವ ಕಕುರಿತು ಚಿಂತನೆ ಇದೆ. ಒಂದು ಮದುವೆಗೆ ಕನಿಷ್ಠ 45 ಸಾವಿರ ರೂಪಾಯಿ ವೆಚ್ಚ ಮಾಡಲಿದ್ದೇವೆ. ಜನರ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ. ಕೆಲಸ ಮಾಡುವುದು ನಮ್ಮ ಇಲಾಖೆ ಕೆಲಸವಾಗಿದೆ.