ಬೆಂಗಳೂರು : ಬೆಕ್ಕಿನ ಕನಸಲ್ಲಿ ಸದಾ ಇಲಿ ಎಂಬಂತೆ ಡಿ.ಕೆ.ಶಿವಕುಮಾರ್ ಯಾವಾಗಲೂ ಹಿಂದುತ್ವದ ವಿರುದ್ಧವೇ ಚಿಂತಿಸುತ್ತಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು “ ಹಿಂದು ದೇಗುಲಗಳನ್ನು ಸ್ವತಂತ್ರಗೊಳಿಸಿ ಬಿಜೆಪಿ ಕಾರ್ಯಕರ್ತರಿಗೆ ಹಸ್ತಾಂತರಿಸಲು ಸರಕಾರ ಹೊರಟಿದೆʼʼ ಎಂದು ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪಕ್ಕೆ ಪ್ರತಿ ಏಟು ನೀಡಿದರು.
ಶಿವಕುಮಾರ್ ಹಾಗೂ ಕಾಂಗ್ರೆಸ್ ಸದಾ ಹಿಂದುತ್ವದ ವಿರುದ್ಧವೇ ಚಿಂತನೆ ನಡೆಸುತ್ತಾರೆ. ಬೆಕ್ಕಿನ ಕನಸಲ್ಲಿ ಸದಾ ಇಲಿ ಎಂಬ ಮಾತಿನಂತೆ, ಇವರು ಕನಸು ಮನಸಿನಲ್ಲೂ ಹಿಂದು ಧಾರ್ಮಿಕ ಭಾವನೆಯ ವಿರುದ್ಧ ಚಿಂತನೆ ನಡೆಸುತ್ತಾರೆ. ದೇಗುಲಗಳನ್ನು ಸರಕಾರದ ಹಿಡಿತದಿಂದ ಸ್ವತಂತ್ರಗೊಳಿಸುವುದು ಎಂದರೆ ಅದನ್ನು ಖಾಸಗಿ ಪರಭಾರೆ ಮಾಡುವುದಲ್ಲ. ಎಲ್ಲದಕ್ಕೂ ಒಂದು ವ್ಯವಸ್ಥೆ ಇರುತ್ತದೆ. ಇಂಥ ಹೇಳಿಕೆ ನೀಡುವ ಮೂಲಕ ಶಿವಕುಮಾರ್ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಕ್ರಮ : ರಾಜ್ಯದಲ್ಲಿ ಹಾಗೂ ದೇಶದಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಕೋವಿಡ್ ಪ್ರಕರಣಗಳು ಹೆಚ್ಚಿರುವ ಎಂಟು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಎಂದು ಕೇಂದ್ರ ಸರಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುತ್ತೇವೆ ಎಂದು ತಿಳಿಸಿದರು.
ಹೊಸ ವರ್ಷದಲ್ಲಿ ಹೊಸ ಚೈತನ್ಯದೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದೇನೆ. ಅದೇ ರೀತಿ ಜಿಲ್ಲಾಧಿಕಾರಿಗಳು ದಿಕ್ಸೂಚಿ ಕಾರ್ಯಕ್ರಮದೊಂದಿಗೆ ಕೆಲಸ ಮಾಡಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಜತೆಗೆ ಸಭೆ ನಡೆಸಿ ಗುರಿ ನಿರ್ಧರಿತ ಕಾರ್ಯಕ್ರಮ ಅನುಷ್ಠಾನಕ್ಕೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.