Advertisement

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿಎಂ ಅನುಮತಿ

02:55 PM Aug 06, 2019 | Suhan S |

ಶಿವಮೊಗ್ಗ: ಜಿಲ್ಲೆಯ ಶಿವಮೊಗ್ಗ ತಾಲೂಕಿನ ಕುಂಸಿ, ಆಯನೂರು, ಹಾರ್ನಹಳ್ಳಿ ಹೋಬಳಿಯ 75 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಹೇಳಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಮತ್ತು ತುಂಗಾ ನದಿಗಳಿದ್ದರೂ ಸಹ ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಾವರಿ ಯೋಜನೆ ಇರಲಿಲ್ಲ. ಆದರೆ ಯಡಿಯೂರಪ್ಪನವರು ಅಧಿಕಾರಕ್ಕೆ ಬರುತ್ತಿದ್ದಂತೆ ಏತ ನೀರಾವರಿ ಯೋಜನೆಗೆ ಮಂಜೂರಾತಿ ನೀಡಿದ್ದು ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಹೇಳಿದರು. ಈ ಯೋಜನೆಯನ್ವಯ ಮೂರು ಹೋಬಳಿಗಳ 75 ಕೆರೆಗಳಿಗೆ ತುಂಗಾ ನದಿಯಿಂದ ನೀರು ತುಂಬಿಸಲಾಗುತ್ತದೆ. ಇದರಿಂದ ಹೆಚ್ಚಾದ ನೀರನ್ನು ಅಂಜನಾಪುರ ಜಲಾಶಯಕ್ಕೆ ಬಿಡಲಾಗುವುದು ಎಂದ ಅವರು, ಈ ಯೋಜನೆಯಿಂದ 3 ಹೋಬಳಿಗಳ 145 ಹಳ್ಳಿಗಳಿಗೆ ನೀರಾವರಿ ಯೋಜನೆ ಸಿಕ್ಕಂತಾಗುತ್ತದೆ. ತುಂಗಾ ನದಿಯಿಂದ 0.75 ಟಿಎಂಸಿ ನೀರನ್ನು ಈ ಯೋಜನೆಗಾಗಿ ಎತ್ತಲಾಗುತ್ತದೆ ಎಂದು ವಿವರಿಸಿದರು.

ಸುಮಾರು 250 ಕೋಟಿ ರೂ.ಯೋಜನೆಯ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಸಂಸತ್‌ ಅಧಿವೇಶನದ ನಡುವೆಯೂ ತಮ್ಮ ಬಿಡುವಿನ ವೇಳೆಯಲ್ಲಿ ಇದರ ಬಗ್ಗೆ ಸಾಕಷ್ಟು ಶ್ರಮ ವಹಿಸಿದ್ದು ಇದರ ಪರಿಣಾಮ ಇದೀಗ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದು ಹೇಳಿದರು.

ಇದಲ್ಲದೆ ಸೂಗೂರು ಬಳಿ 10 ಕೋಟಿ ರೂ.ವೆಚ್ಚದಲ್ಲಿ ಬ್ಯಾರೇಜ್‌ ನಿರ್ಮಿಸಲು ಸಹ ಅನುಮೋದನೆ ದೊರೆತಿದ್ದು, ಈ ಕಾಮಗಾರಿ ಸಹ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಎಂ.ಶಂಕರ್‌, ಎನ್‌.ಜೆ. ರಾಜಶೇಖರ್‌, ಮುಖಂಡರಾದ ಬಿಳಕಿ ಕೃಷ್ಣಮೂರ್ತಿ, ಎಚ್.ಸಿ. ಬಸವರಾಜಪ್ಪ, ಮಧುಸೂದನ್‌, ಹಿರಣ್ಣಯ್ಯ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next