ಆಳಂದ: ರಾಜ್ಯದ ಹಿಂದುಳಿದ ಮಾಲಗಾರ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮಾಲಗಾರ ಸಮಾಜ ಬಾಂಧವರು ಈಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ವಿವಿಧ ಸಚಿವರು ಮತ್ತು ಶಾಸಕರಿಗೆ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯದ ವಿವಿಧ ಮೂಲೆ-ಮೂಲೆಗಳಿಂದ ಅರಬಾವಿ ಶಾಸಕ, ಕೆಎಂಎಫ್ ರಾಜ್ಯಾಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ರಾಜ್ಯ ಮಾಳಿ-ಮಾಲಗಾರ ಮಹಾಸಭಾ ರಾಜ್ಯಾಧ್ಯಕ್ಷ ಡಾ| ಸಿ.ಬಿ. ಕುಲಗೂಡ ನಿಯೋಗದೊಂದಿಗೆ ತೆರಳಿದ ಸಮಾಜ ಬಾಂಧವರು, ರಾಜ್ಯದಲ್ಲಿ 25 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜದ ಜನಾಂಗವು ಹೆಚ್ಚಾಗಿ ಕೃಷಿ, ತೋಟಗಾರಿಕೆಯಲ್ಲಿ ತೊಡಗಿದ್ದಾರೆ.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದುಕೊಂಡಿದ್ದು, ಸದ್ಯ ನಿಗಮ ಸ್ಥಾಪಿಸಿ ಅನುಕೂಲ ಒದಗಿಸಲು ಇದಕ್ಕೆ 100 ಕೋಟಿ ರೂ. ಅನುದಾನ, ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ನೀಡಬೇಕು. ಶಿವಶರಣಿ ನಿಲೂರು ನಿಂಬೆಕ್ಕನವರ ಜನ್ಮಸ್ಥಳ ಅಭಿವೃದ್ಧಿ ಪಡಿಸಬೇಕು. ಸಮಾಜದ ಜನರು ಹೆಚ್ಚಿರುವ ಜಿಲ್ಲೆಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಐದು ಎಕರೆ ಜಮೀನು ನೀಡಬೇಕು ಎಂದು ಒತ್ತಾಯಿಸಿದರು.
ನಿಯೋಗದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು, ಸಮಾಜ ಬಾಂಧವರ ಅವಶ್ಯಕ ಬೇಡಿಕೆಗಳನ್ನು ಬಜೆಟ್ ನಲ್ಲಿ ಈಡೇರಿಸುವ ಕುರಿತು ಭರವಸೆ ನೀಡಿದ್ದಾರೆ ಎಂದು ಮುಖಂಡರು ಹೇಳಿಕೊಂಡಿದ್ದಾರೆ. ಅಲ್ಲದೆ, ಸಮಾಜ ಮುಖಂಡರು ಸಚಿವ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಶ್ರೀರಾಮುಲು, ಕೆ.ಎಸ್. ಈಶ್ವರಪ್ಪ, ಕ್ಷೇತ್ರದ ಶಾಸಕ ಸುಭಾಷ ಗುತ್ತೇದಾರ, ಉಪಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ ಸೇರಿದಂತೆ ಇಂಡಿ, ಕುಡಚಿ ಕ್ಷೇತ್ರ ಸೇರಿ 40 ಕ್ಷೇತ್ರಗಳ ಶಾಸಕರಿಗೆ ಬೇಡಿಕೆಯ ಮನವಿ ಸಲ್ಲಿಸಿದ್ದಾರೆ.
ನಿಯೋಗದಲ್ಲಿ ಮಾಲಗಾರ ಮಹಾಸಭಾ ರಾಜ್ಯಾಧ್ಯಕ್ಷ ಡಾ| ಸಿ.ಬಿ. ಕುಲಗೂಡ, ಮುಖಂಡ ಬಸವರಾಜ ಬಾಳಿಕಾಯಿ, ಆಳಂದ ತಾಲೂಕು ಅಧ್ಯಕ್ಷ ಪಂಡಿತ ಶೇರಿಕಾರ, ಸುಭಾಷ ಬಳೂರಗಿ, ಗುರುನಾಥ ಧೂಳೆ, ಮಲ್ಲಿಕಾರ್ಜುನ ತಡಕಲೆ, ಶಿವಪ್ಪ ಕೊಳ್ಳಶೆಟ್ಟಿ, ಸಿದ್ಧರಾಮ ತೋಳನೂರೆ, ಅಥಣಿಯ ಮಹಾಂತೇಶ ಮಾಳಿ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಮಂದಿ ನಿಯೋಗದಲ್ಲಿ ಪಾಲ್ಗೊಂಡಿದ್ದರು.