Advertisement
ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಕ್ರಿಯಾಯೋಜನೆಯಲ್ಲಿ ಮೀಸಲಿರಿಸಿದ ಅನುದಾನದಲ್ಲಿ ದ.ಕ. ಜಿಲ್ಲೆಯ 13 ನಗರ ಸ್ಥಳೀಯಾಡಳಿತ ಸಂಸ್ಥೆಗಳು ಕೂಡ 124 ಸ್ಕೀಮ್‌ಗಳಿಗೆ 1,595 ಫಲಾನುಭವಿಗಳನ್ನು ಆಯ್ಕೆ ಮಾಡಿ ಜಿಲ್ಲಾ ನಗರಾಭಿವೃದ್ಧಿ ಕೋಶ(ಡಿಯುಡಿಸಿ)ಕ್ಕೆ ಕಳುಹಿಸಿವೆಈ ರೀತಿ ಆಯ್ಕೆಯಾದವರಿಗೆ ಕೆಲವು ಕಡೆ ಕಳೆದ ಫೆಬ್ರವರಿ ಅಂತ್ಯದಿಂದಲೇ ಮಂಜೂರಾತಿ-ಕಾಮಗಾರಿ ಆದೇಶ ಪತ್ರವನ್ನು ವಿತರಿಸಲಾಗಿದೆ. ಆದರೆ ಯಾರಿಗೂ ಸಹಾಯಧನ ಲಭ್ಯವಾಗಿಲ್ಲ. ಅಧಿಕಾರಿಗಳ ಬಳಿ ಕೇಳಿದರೂ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂಬುದು ಫಲಾನುಭವಿಗಳ ಆರೋಪ.
ದ.ಕ. ಜಿಲ್ಲೆಯಲ್ಲಿ ಆಯ್ಕೆಯಾದ 1,595 ಫಲಾನುಭವಿಗಳಿಗೆ ಸಹಾಯಧನ ನೀಡುವುದಕ್ಕೆ ಸುಮಾರು 10.95 ಕೋ.ರೂ. ಅನುದಾನ ಬರಲು ಬಾಕಿ ಇದ್ದು, ಮೊತ್ತ ಬಿಡುಗಡೆಗಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಜೂನ್ 6ರಂದು ಸರಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಲಾಗಿದೆ. ಪೂರಕವಾಗಿ ಸ್ಪಂದಿಸಿರುವ ಸರಕಾರ ಜುಲೈ 31ರಂದು ಇಂತಹ ಅನುದಾನಗಳನ್ನು ಬಿಡುಗಡೆ ಮಾಡಬಹುದು ಎಂಬ ಒಪ್ಪಿಗೆ ನೀಡಿದೆ. ಅನುದಾನ ಮಂಜೂರಾತಿಯ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಆಗಸ್ಟ್ ಅಂತ್ಯದ ವೇಳೆಗೆ ಸಹಾಯಧನ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Related Articles
ಈ ವರ್ಷದ ಆರಂಭ ದಿಂದಲೇ ರಾಜ್ಯದೆಲ್ಲೆಡೆ ಚುನಾ ವಣೆಯ ತರಾತುರಿಯಲ್ಲಿ ಮತ್ತೆ ಗೆದ್ದು ಬರಬೇಕು ಎನ್ನುವ ಉತ್ಸಾಹದಿಂದ ಅಧಿಕಾರಿಗಳಿಗೆ ಆದೇಶವನ್ನು ನೀಡಿ ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ, ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಗಿತ್ತು. ಅದೇ ರೀತಿ ಪ್ರಕ್ರಿಯೆಗಳು ಈ ಭಾಗದಲ್ಲೂ ನಡೆದಿದ್ದು, ಆಯಾಯ ಭಾಗದ ಶಾಸಕರು ನಗರೋತ್ಥಾನ ಯೋಜನೆ ಹಂತ-4ರ ಆದೇಶ ಪತ್ರ ವಿತರಿಸಿದ್ದರು.
Advertisement
ಈ ಪ್ರಕ್ರಿಯೆ ಕಳೆದ ಫೆಬ್ರವರಿ ಯಿಂದಲೇ ಆರಂಭಗೊಂಡಿತ್ತು. ಆದರೆ ಕೆಲವು ಕಡೆ ಫಲಾನುಭವಿಗಳ ಆಯ್ಕೆ, ಕ್ರಿಯಾಯೋಜನೆ ವಿಳಂಬವಾದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಚುನಾವಣೆ ಸಮೀಪ ಬಂದಾಗ ಆದೇಶ ಪತ್ರ ವಿತರಿಸಿದರೆ ಅನುದಾನ ಬರುವುದೇ ಇಲ್ಲ ಎಂದು ಪತ್ರ ವಿತರಣೆಯನ್ನು ನಿರಾಕರಿಸಿದ್ದರು. ಹೀಗಾಗಿ ಕೆಲವೆಡೆ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಆದೇಶ ಪತ್ರ ನೀಡಿದ್ದರೆ, ಇನ್ನು ಕೆಲವು ಕಡೆ ಚುನಾವಣೆ ಮುಗಿದ ಬಳಿಕವೇ ಆದೇಶ ಪತ್ರ ವಿತರಿಸಲಾಗಿತ್ತು.
ಯುಎಲ್ಬಿಗಳುಯಾವ್ಯಾವವು?
ದ.ಕ. ಜಿಲ್ಲೆಯಲ್ಲಿ ಒಟ್ಟು 13 ನಗರ ಸ್ಥಳೀಯಾಡಳಿತ ಸಂಸ್ಥೆ(ಯುಎಲ್‌ಬಿ)ಗಳಾದ ಪುತ್ತೂರು, ಉಳ್ಳಾಲ ನಗರಸಭೆ, ಬಂಟ್ವಾಳ, ಮೂಡುಬಿದಿರೆ, ಸೋಮೇಶ್ವರ ಪುರಸಭೆ, ಮೂಲ್ಕಿ, ಕೋಟೆಕಾರು, ಸುಳ್ಯ, ಬೆಳ್ತಂಗಡಿ, ವಿಟ್ಲ, ಕಡಬ, ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಉಡುಪಿ ಜಿಲ್ಲೆಯಲ್ಲಿ ಉಡುಪಿ ನಗರಸಭೆ, ಕಾರ್ಕಳ, ಕಾಪು, ಕುಂದಾಪುರ ಪುರಸಭೆ, ಸಾಲಿಗ್ರಾಮ, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ವೈಯಕ್ತಿಕ ನೆಲೆಯ ಸಹಾಯಧನ ಬರುವುದಕ್ಕೆ ಬಾಕಿ ಇದೆ. ಉಡುಪಿಯಲ್ಲಿ 12 ಕೋ. ರೂ.ಕ್ರಿಯಾಯೋಜನೆ
ಉಡುಪಿ ಜಿಲ್ಲೆಗೆ ಸಂಬಂಧಿಸಿ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಉಡುಪಿ ನಗರಸಭೆ 6 ಕೋ.ರೂ., ಕಾರ್ಕಳ ಪುರಸಭೆ 1.5 ಕೋ. ರೂ. ಕುಂದಾಪುರ ಪುರಸಭೆ 1.5 ಕೋ.ರೂ. ಕಾಪು ಪುರಸಭೆ 1.5 ಕೋ.ರೂ. ಸಾಲಿಗ್ರಾಮ ಪ.ಪಂ. 76 ಲಕ್ಷ ರೂ. ಬೈಂದೂರು ಪ.ಪಂ. 76 ಲಕ್ಷ ರೂ. ಸೇರಿ ಒಟ್ಟು 12.19 ಕೋ.ರೂ. ಕ್ರಿಯಾ ಯೋಜನೆಯ ಮೊತ್ತವನ್ನು ಅನುಮೋದನೆಗೆ ಸಲ್ಲಿಸಲಾಗಿದೆ. ಹಂತಹಂತವಾಗಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈ ಅನುದಾನ ಮಂಜೂರಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಫಲಾನುಭವಿಗಳ ಆಯ್ಕೆ ಪೂರ್ಣಗೊಳ್ಳದಿರುವ ಕಾರಣ ನಿರ್ದಿಷ್ಟ ಸಂಖ್ಯೆ ಲಭ್ಯವಿಲ್ಲ. ಕಳೆದ ಫೆಬ್ರವರಿಯಲ್ಲಿ ನಮಗೆ ಮಂಜೂರು ಪತ್ರವನ್ನು ನೀಡಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಹಣ ಬರುತ್ತದೆ ಎಂದಿದ್ದರು. ಆದರೆ ನಾಲ್ಕೈದು ತಿಂಗಳು ಕಳೆದರೂ ಇನ್ನೂ ಬಂದಿಲ್ಲ. ಅಧಿಕಾರಿಗಳಲ್ಲಿ ಮಾಹಿತಿ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಸರಕಾರದಿಂದ ಅನುದಾನ ಬರುವ ಮೊದಲೇ ಮಂಜೂರು ಪತ್ರ ಕೊಟ್ಟಿರುವುದು ಯಾಕೆ ಎಂಬುದು ನಮ್ಮ ಪ್ರಶ್ನೆ.
– ಎಂ. ಬಾಲಕೃಷ್ಣ ನಾಯಕ್, ಫಲಾನುಭವಿ, ಮೂಡುಬಿದಿರೆ ಪುರಸಭೆ ಅಮೃತ ನಗರೋತ್ಥಾನ ಯೋಜನೆ ಹಂತ-4ಕ್ಕೆ ಸಂಬಂಧಿಸಿದಂತೆ ಮಂಜೂರಾತಿ ಪ್ರತಿ ನೀಡಿದ್ದರೂ ಮೊತ್ತ ಬಿಡುಗಡೆಯಾಗದ ಕಾರಣ ಸಹಾಯಧನ ನೀಡುವುದು ಸಾಧ್ಯವಾಗಿಲ್ಲ.
ಈ ಕುರಿತು ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಸರಕಾರದಿಂದ
ಪೂರಕ ಸ್ಪಂದನೆ ವ್ಯಕ್ತವಾಗಿದೆ.
– ಅಭಿಷೇಕ್, ಯೋಜನಾ ನಿರ್ದೇಶಕರು,
ಜಿಲ್ಲಾ ನಗರಾಭಿವೃದ್ಧಿ ಕೋಶ, ದಕ್ಷಿಣ ಕನ್ನಡ – ಕಿರಣ್ ಸರಪಾಡಿ