ಬೆಂಗಳೂರು: ಮಹಾರಾಷ್ಟ್ರ ಮಳೆ ಪರಿಣಾಮ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಆ ಭಾಗದ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಅಲ್ಲದೇ ಸೋಮವಾರ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.
ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಮಳೆಯಿಂದ ಕೃಷ್ಣಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಪ್ರವಾಹ ಉಂಟಾಗಿ ಜನ ತೊಂದರೆಗೆ ಒಳಗಾಗಿದ್ದಾರೆ. ಸಮರೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕ್ರಮಗಳನ್ನು ರೂಪಿಸಲು ಮುಂದಾಗಿ ಎಂದು ಸೂಚನೆ ನೀಡಿದರು.
ಮುಖ್ಯ ಕಾರ್ಯದರ್ಶಿಗಳ ಮೂಲಕ ಸಂಬಂಧಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಧಿಕಾರಿಗಳಿಗೆ ಅಗತ್ಯ ನಿರ್ದೇಶನ ಸಹ ಹೊರಡಿಸಲಾಗಿದೆ. ಪರಿಹಾರ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ. ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಅಧಿಕಾರಿಗಳಿಗೆ ಹೇಳಿದರು.
ಹಣಕಾಸಿನ ಲಭ್ಯತೆ: ಬೆಳಗಾವಿ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 11.42 ಕೋಟಿ ರೂ., ವಿಜಯಪುರ ಜಿಲ್ಲಾಧಿಕಾರಿಯ ಪಿ.ಡಿ.ಖಾತೆಯಲ್ಲಿ 9.10 ಕೋಟಿ ರೂ., ಬಾಗಲಕೋಟೆ ಜಿಲ್ಲಾಧಿಕಾರಿಯ ಪಿ.ಡಿ. ಖಾತೆಯಲ್ಲಿ 10.55 ಕೋಟಿ ರೂ., ರಾಯಚೂರು ಜಿಲ್ಲಾಧಿಕಾರಿಯ ಪಿ.ಡಿ.ಖಾತೆಯಲ್ಲಿ 13.02 ಕೋಟಿ ರೂ. ಹಾಗೂ ಯಾದಗಿರಿ ಜಿಲ್ಲಾಧಿಕಾರಿಯ ಪಿ.ಡಿ. ಖಾತೆಯಲ್ಲಿ 10.29 ಕೋಟಿ ರೂ. ಅನುದಾನ ಲಭ್ಯವಿದೆ.
ಪ್ರತಿಕೂಲ ಪರಿಣಾಮದಿಂದ ಬೆಳಗಾವಿ ಸಮೀಕ್ಷೆಯಿಲ್ಲ: ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರತಿಕೂಲ ವಾತಾವರಣ ಇರುವ ಹಿನ್ನೆಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಸಲಹೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಬೆಳಗಾವಿ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.