ಹುಬ್ಬಳ್ಳಿ: ಇಂದಿನ ಆಧುನಿಕತೆಯಲ್ಲಿ ಮನುಷ್ಯ ಅನಾರೋಗ್ಯಕರ ಜೀವನಶೈಲಿಯಿಂದಾಗಿ ರೋಗ ಆಹ್ವಾನಿಸಿಕೊಳ್ಳುತ್ತಿದ್ದಾನೆ. ನಿಸರ್ಗದ ಭಾಗವಾಗಿ ಸರಳ ಜೀವನ ಶೈಲಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಬದುಕು ರೂಪಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಗೋಕುಲ ರಸ್ತೆ ಬಸವೇಶ್ವರ ನಗರದ ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ(ಎಸ್ ಎಎಂಸಿಎಚ್) ಆವರಣದಲ್ಲಿ ಆಯೋಜಿಸಿರುವ ಆಯುರ್ ಎಕ್ಸ್‌ಪೋ 2022ರಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ರೋಗ ಗುಣಪಡಿಸಿಕೊಳ್ಳುವ ನಿರೋಧಕ ಶಕ್ತಿ ನಮ್ಮ ದೇಹದಲ್ಲಿದೆ. ರೋಗ ಆಹ್ವಾನಿಸಿಕೊಳ್ಳುವ ಅನಾರೋಗ್ಯಕರ ಜೀವನಶೈಲಿ ನಮ್ಮಲ್ಲಿಯೇ ಇದೆ. ಯಾವುದು ಉತ್ತಮ ಎಂಬುದನ್ನು ನಾವೇ ನಿರ್ಧರಿಸಬೇಕು. ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ಔಷಧ, ಚಿಕಿತ್ಸೆ ಹಾಗೂ ಆಸ್ಪತ್ರೆ ಖರ್ಚು-ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಆಯುರ್ವೇದ ಬಡವರಿಗೆ ಉತ್ತಮ ಔಷಧಿಯಾಗಿದೆ. ರೋಗ ಬೇಗ ವಾಸಿಯಾಗಬೇಕೆಂದು ಜನ ಬಯಸುತ್ತಾರೆ. ಹೀಗಾಗಿ ಆಯುರ್ವೇದ ಪದ್ಧತಿ ಚಿಕಿತ್ಸೆ ಕೊಡುವವರು ಸಹ ಅವರ ಆಸೆಗೆ ತಕ್ಕಂತೆ ನೀಡುತ್ತಿರುವುದರಿಂದ ಆಯುರ್ವೇದದ ಗುಣಮಟ್ಟ ಕಡಿಮೆಯಾಗುತ್ತಿದೆ.
ಸ್ಟಿರಾಯ್ಡ ಬಳಕೆ ಹೆಚ್ಚುತ್ತಿದೆ. ಕಾರಣ ಆಯುರ್ವೆàದ ವೈದ್ಯರು ಪರಂಪರಾಗತವಾಗಿ ರೂಢಿಸಿಕೊಂಡು ಬಂದ ಚಿಕಿತ್ಸಾ ವಿಧಾನದಲ್ಲಿ ರಾಜಿ ಮಾಡಿಕೊಳ್ಳದೆ ಗುಣಮಟ್ಟ ಕಾಯ್ದುಕೊಂಡರೆ, ಶುದ್ಧ ಆಯುರ್ವೇದ ಪದ್ಧತಿಯ ಚಿಕಿತ್ಸೆ ಅನುಸರಿಸಿದರೆ ಉಜ್ವಲ ಭವಿಷ್ಯವಿದೆ. ಇಂದಿನ ದಿನಮಾನಗಳಲ್ಲಿ ಆಯುರ್ವೇದದ ಏಕರೂಪ ಚಿಕಿತ್ಸಾ ಪದ್ಧತಿ ಪರಿಪಾಲಿಸುವುದು ಅಗತ್ಯ. ಇದಕ್ಕೆ ಬೇಕಾಗುವ ಸಹಕಾರ ನೀಡಲು ಸರಕಾರ ಸದಾ ಸಿದ್ಧ. ನಕಲಿ ವೈದ್ಯರ ಹಾವಳಿಯಿಂದ ಆಯುಷ್ ವೈದ್ಯರಿಗೆ ಅಪಾಯವಿದ್ದು, ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಆಯುರ್ವೆàದದಲ್ಲಿ ಇನ್ನು ಹೆಚ್ಚು ಸಂಶೋಧನೆಗಳಾಗಿ ಅವುಗಳ ಪರಸ್ಪರ ವಿನಿಮಯ ಮತ್ತು ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಈ ರೀತಿಯ ಎಕ್ಸಪೋಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಾದ್ಯಂತ ನಡೆಯಬೇಕು. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಅಡ್ಡಪರಿಣಾಮಗಳಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಶರ್ಮಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ|ಕೆ.ಎಸ್. ಶರ್ಮಾ ಪ್ರಾಸ್ತಾವಿಕ ಮಾತನಾಡಿ, ಜನಸಾಮಾನ್ಯರಿಗೆ ಆಯುರ್ವೇದ ವೈದ್ಯಶಾಸ್ತ್ರದ ಸಂಪೂರ್ಣ ಮಾಹಿತಿ ಮತ್ತು ಅದರಲ್ಲಿರುವ ವಿವಿಧ ವಿಶಿಷ್ಟ ಚಿಕಿತ್ಸಾ ಕ್ರಮಗಳನ್ನು ಪರಿಚಯಿಸುವ ಸದುದ್ದೇಶದಿಂದ ಆಯುರ್ ಎಕ್ಸ್‌ಪೋ ಆಯೋಜಿಸಿರುವುದು ಶ್ಲಾಘನೀಯ. ಪ್ರಧಾನಿ ಮೋದಿಯವರು ಆಯುರ್ವೆàದಕ್ಕೆ ವಿಶ್ವಮಾನ್ಯತೆ ಒದಗಿಸಲು ದಾಪುಗಾಲು ಇಟ್ಟಿದ್ದಾರೆ. ಸಿಎಂ ಬೊಮ್ಮಾಯಿ ಕೂಡ ಅಂತಹ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಡಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ, ಎಸ್‌ಎಎಂಸಿಎಚ್ ಅಧ್ಯಕ್ಷ ಮೋಹನ ಲಿಂಬಿಕಾಯಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಸಂಸ್ಥೆಯ ಪ್ರಾಚಾರ್ಯ ಡಾ|ಎಸ್.ಕೆ. ಬನ್ನಿಗೋಳ, ಕಾರ್ಯದರ್ಶಿ ಡಾ| ಸೋಮಶೇಖರ ಹುದ್ದಾರ ಮೊದಲಾದವರಿದ್ದರು. ಡಾ|ಸಂತೋಷ ಭೋಜಶೆಟ್ಟರ ಸ್ವಾಗತಿಸಿದರು. ಡಾ| ಶಶಿಕಾಂತ ಹಿರೇಮಠ ವಂದಿಸಿದರು.