Advertisement

ಜಿಲ್ಲೆಯಲ್ಲಿ ಕ್ಲಸ್ಟರ್‌ ಮಾದರಿಯಲ್ಲಿ ತ್ಯಾಜ್ಯ ವಿಲೇ ಘಟಕ

10:30 AM Dec 08, 2019 | mahesh |

ಕುಂದಾಪುರ: ಸ್ವಚ್ಛ ಭಾರತ್‌ ಯೋಜನೆಯಡಿ ಪಂಚಾಯತ್‌ ವ್ಯಾಪ್ತಿಯಲ್ಲಿ ಸಿದ್ಧಗೊಳ್ಳಬೇಕಿದ್ದ ಘನ ದ್ರವ ತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆಯಲ್ಲಿ ಇನ್ನೂ ಗುರಿ ಸಾಧನೆಯಾಗದ ಕಾರಣ ಕ್ಲಸ್ಟರ್‌ ಮಾದರಿಯಲ್ಲಿ ತ್ಯಾಜ್ಯ ವಿಲೇ ಘಟಕ ರಚನೆಗೆ ಜಿಲ್ಲಾಡಳಿತ ಮುಂದಾಗಿದೆ. ಮೂರು ನಾಲ್ಕು ಪಂಚಾಯತ್‌ಗಳಿಗೆ ಒಂದೇ ವಿಲೇವಾರಿ ಘಟಕ ರಚಿಸಿ ಈ ಮೂಲಕ ಪಂಚಾಯತ್‌ಗಳ ಹೊರೆ ತಗ್ಗಿಸಿ ಆದಾಯ ಹೆಚ್ಚಿಸಲು ಜಿಲ್ಲಾಡಳಿತ ಯೋಜಿಸಿದೆ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ 60-70 ಲಕ್ಷ ರೂ. ವೆಚ್ಚದಲ್ಲಿ ಘಟಕ ರಚನೆಯೂ ಸಾಧ್ಯವಿದೆ. ಆದರೆ ದೊಡ್ಡ ಮೊತ್ತವಾದರೆ ಅದು ಸರಕಾರವೇ ಮಂಜೂರು ಮಾಡಬೇಕಾಗುತ್ತದೆ.

Advertisement

ಘಟಕ ರಚನೆಗೆ 20 ಲಕ್ಷ ರೂ.
ಬಯಲುಶೌಚ ಮುಕ್ತ ಹಾಗೂ ಸ್ವಚ್ಛ ಭಾರತ್‌ ಯೋಜನೆಯಡಿ ಘನ ದ್ರವ ತ್ಯಾಜ್ಯ ವಿಲೇ ಘಟಕ (ಎಸ್‌ಎಲ್‌ಆರ್‌ಎಂ- ಸಾಲಿಡ್‌ ಲಿಕ್ವಿಡ್‌ ವೇಸ್ಟ್‌ ರಿಸೋರ್ಸ್‌ ಮೆನೇಜ್‌ಮೆಂಟ್‌) ನಿರ್ಮಾಣಕ್ಕೆ ಪ್ರತಿ ಪಂಚಾಯತ್‌ಗೆ 20 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಪಂಚಾಯತ್‌ ಇದಕ್ಕಾಗಿ ಸ್ವಂತ ಭೂಮಿ ಹೊಂದಿರಬೇಕು. ಅನೇಕ ಪಂಚಾಯತ್‌ಗಳಲ್ಲಿ ಜಾಗದ ಸಮಸ್ಯೆ ಇರುವ ಕಾರಣ ಅನುದಾನ ಪಡೆದು ಕೊಳ್ಳಲು ಸಾಧ್ಯವಾಗಿಲ್ಲ. ಘಟಕಗಳ ರಚನೆಯೂ ಆಗಿಲ್ಲ. 40 ಪಂಚಾಯತ್‌ಗಳಿಗೆ ತಲಾ 20 ಲಕ್ಷ ರೂ.ಗಳಂತೆ ಘಟಕ ರಚನೆಗೆ ಅನುದಾನ ನೀಡಲಾಗಿದೆ. 33 ಕಡೆ ರಚನೆಯಾಗಿದ್ದು 15
ಪಂಚಾಯತ್‌ಗಳಲ್ಲಿ ಕಾಮಗಾರಿ ಪೂರ್ಣ ಗೊಂಡಿದೆ. 30 ಪಂ.ಗಳು ಸ್ವಂತ ಅನುದಾನದಲ್ಲಿ ಘಟಕ ರಚಿಸಿವೆ.

ಎಲ್ಲೆಲ್ಲಿ ?
2017ರಿಂದ ಯೋಜನೆ ಆರಂಭವಾಗಿದ್ದರೂ ಜಿಲ್ಲೆಯ 158 ಪಂಚಾಯತ್‌ಗಳ ಪೈಕಿ 56 ಪೂರ್ಣ ಪ್ರಮಾಣದ ಘಟಕಗಳ ರಚನೆಯಷ್ಟೇ ಆಗಿದೆ. ಕಾರ್ಕಳದಲ್ಲಿ 28, ಕುಂದಾಪುರ ದಲ್ಲಿ 17, ಉಡುಪಿಯಲ್ಲಿ 11 ಕಡೆ ಗಳಲ್ಲಿ ಘಟಕಗಳಿವೆ. ಈ ಪೈಕಿ 23 ಕಡೆ ದ್ರವ , ಘನ ತ್ಯಾಜ್ಯ ವಿಲೇ ಮಾಡಲಾಗುತ್ತದೆ. ಉಳಿದೆಡೆ ಘನತ್ಯಾಜ್ಯ ಮಾತ್ರ ವಿಲೇಯಾಗುತ್ತದೆ. ಘಟಕಗಳಲ್ಲಿ ಕಸ ತೊಳೆಯುವ ವ್ಯವಸ್ಥೆ, ತೊಳೆದ ಕಸ ಒಣಗಿಸುವ ವ್ಯವಸ್ಥೆ, ಸಂಗ್ರಹಕ್ಕೆ ತ್ರಿಚಕ್ರ ವಾಹನ, ಕೊಳೆಯುವ ಕಸದ ಕಾಂಪೋಸ್ಟ್‌ ಗುಂಡಿ ಇರುತ್ತವೆ.

ಏನಿದು ಕ್ಲಸ್ಟರ್‌ ಮಾದರಿ?
ಪಂಚಾಯತ್‌ಗಳಲ್ಲಿ ಜಾಗದ ಕೊರತೆಯಿದ್ದು ತ್ಯಾಜ್ಯ ವಿಲೇ ಘಟಕ ರಚನೆ ಕಷ್ಟವಾಗುತ್ತಿದೆ. ಅದಕ್ಕಾಗಿ ಜಾಗ ಇರುವ ಸನಿಹದ ಪಂಚಾಯತ್‌ ಜತೆ ಒಡಂಬಡಿಕೆ ಮಾಡಿಕೊಂಡು ಮೂರ್ನಾಲ್ಕು ಪಂಚಾಯತ್‌ಗಳು ಜತೆಯಾಗಿ ತ್ಯಾಜ್ಯ ವಿಲೇ ಘಟಕ ರಚಿಸು ವುದೇ ಕ್ಲಸ್ಟರ್‌ ಮಾದರಿ ಘಟಕ. ಈಗಾಗಲೇ ವಂಡ್ಸೆ, ಇಡೂರು, ಚಿತ್ತೂರು ಪಂ.ಗಳು ಪ್ರಸ್ತಾವನೆ ಮುಂದಿಟ್ಟಿದ್ದು ಗೋಪಾಡಿ ಪಂಚಾಯತ್‌ನವರು
ಕೂಡ ಇದೇ ಮಾದರಿ ಅನುಸರಣೆಗೆ ಯೋಗ್ಯ ಎಂದು ಒಪ್ಪಿದ್ದಾರೆ. ಇದರಿಂದಾಗಿ ಜಾಗದ ಉಳಿತಾಯದ ಜತೆಗೆ ಖರ್ಚಿನ ಉಳಿತಾಯ ಆಗಲಿದೆ. ಕಸ ವಿಲೇಗೆ ಉಪಯೋಗಿಸುವ ಸಿಬಂದಿಯ ವೆಚ್ಚ ಕಡಿಮೆಯಾಗಲಿದ್ದು ಆದಾಯದಲ್ಲಿ ವಿಂಗಡನೆ ಮಾಡಿಕೊಳ್ಳಲಿವೆ. ಕ್ಲಸ್ಟರ್‌ ಮಟ್ಟದ ಘಟಕ ರಚನೆಗೆ ಜಿಲ್ಲಾ ಪಂಚಾಯತ್‌ ಆಸಕ್ತಿ ವಹಿಸಿದೆ.

ಸಂಪಾದನೆ
ಸಂಗ್ರಹಿಸಿದ ಕಸಗಳನ್ನು 17 ಮಾದರಿಯಲ್ಲಿ ವಿಂಗಡಿಸಿ ಶುಚಿಗೊಳಿಸಿ ಪ್ಲಾಸ್ಟಿಕ್‌ ಸಾಮಗ್ರಿಗಳು, ಲೋಹ, ಗಾಜು ಮೊದಲಾದ ಮರುಬಳಕೆಗೆ ಯೋಗ್ಯವಿರುವುದನ್ನು ಮಾರಾಟ ಮಾಡಿ ಆರ್ಥಿಕ ಸಂಪಾದನೆ ಕೂಡ ಮಾಡಲಾಗುತ್ತದೆ. ಹಸಿಕಸದಿಂದ ಗೊಬ್ಬರ ತಯಾರಿಸಲಾಗುತ್ತದೆ. ಮರುಬಳಕೆಮಾಡಲಾಗದ ವಸ್ತುಗಳನ್ನು ಸಿಮೆಂಟ್‌ ಕಾರ್ಖಾನೆಗಳಿಗೆ ನೀಡಲಾಗುತ್ತದೆ. ಪ್ರತಿದಿನ 10 ಟನ್‌ಗೂ ಅಧಿಕ ಕಸ ಸಂಗ್ರಹವಾಗುತ್ತದೆ. 200ಕ್ಕೂ ಅಧಿಕ ಮಂದಿ ಇದೇ ನೆಲೆಯಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಸ್ವಸಹಾಯ ಸಂಘದ ಸದಸ್ಯರನ್ನು ಇಲ್ಲಿ ಘಟಕಗಳಲ್ಲಿ ಉದ್ಯೋಗಕ್ಕಾಗಿ ಬಳಸಲಾಗುತ್ತದೆ.

Advertisement

ಸಿಎಂಗೆ ಮನವಿ
ರಾ.ಹೆ. ಹೊಂದಿಕೊಂಡ ಗ್ರಾ. ಪಂ.ಗಳು ಸೇರಿದಂತೆ ಕೆಲವು ಪಂಚಾಯತ್‌ಗಳಿಗೆ ತ್ಯಾಜ್ಯ ವಿಲೇ ಘಟಕ ನಿರ್ಮಿಸಲು ಜಾಗದ ಕೊರತೆಯಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಕ್ಲಸ್ಟರ್‌ ಮಾದರಿಯ ಪರಿಕಲ್ಪನೆಯ ಯೋಜನೆಗೆ ಮನವಿ ಮಾಡಲಾಗಿತ್ತು. ಸ್ಪಂದಿಸಿದ ಮುಖ್ಯಮಂತ್ರಿ ಕಾರ್ಯಾಲಯ ಸೂಕ್ತವಾಗಿ ಕ್ರಮ ಕೈಗೊಳ್ಳುವಂತೆ ಪಂಚಾಯತ್‌ ರಾಜ್‌ ಇಲಾಖೆಗೆ ನಿರ್ದೇಶಿಸಿದೆ.
-ಸರಸ್ವತಿ ಪುತ್ರನ್‌, ಅಧ್ಯಕ್ಷರು, ಗೋಪಾಡಿ ಗ್ರಾ. ಪಂ.

ಪ್ರಸ್ತಾಪ ಇದೆ
ಕಸ ವಿಲೇಗೆ ಜಾಗದ ಸಮಸ್ಯೆ ಇರುವ ಕಾರಣ ಮೂರ್ನಾಲ್ಕು ಪಂಚಾಯತ್‌ಗಳು ಒಟ್ಟಾಗಿ ಒಂದೇ ಜಾಗದಲ್ಲಿ ತ್ಯಾಜ್ಯ ವಿಲೇ ಘಟಕ ರಚಿಸುವುದಾದರೆ ಅಂತಹವುಗಳಿಗೆ ಒಟ್ಟಾಗಿ ಅನುದಾನ ನೀಡುವ ಪ್ರಸ್ತಾವ ಇದೆ. ಆದರೆ ಮಂಜೂರಾತಿ ಸರಕಾರದಿಂದಲೇ ಆಗಬೇಕಾಗುತ್ತದೆ. ಅಷ್ಟೂ ಪಂಚಾಯತ್‌ಗಳಿಗೆ ಆ ಘಟಕದ ನಿರ್ವಹಣೆ ಜವಾಬ್ದಾರಿ ಇರುತ್ತದೆ.
-ಪ್ರೀತಿ ಗೆಹಲೋಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next