Advertisement

ಮಂಗಳೂರು, ಕಾರ್ಕಳದಲ್ಲಿ ಕ್ಲಸ್ಟರ್‌: ಸಿಎಂ; ಎಣ್ಣೆಹೊಳೆ ಏತ ನೀರಾವರಿ ಯೋಜನೆ ಲೋಕಾರ್ಪಣೆ

02:26 AM Jun 02, 2022 | Team Udayavani |

ಕಾರ್ಕಳ: ಉದ್ಯೋಗ ಸೃಜನೆ, ದುಡಿಯುವ ವರ್ಗವನ್ನು ಪ್ರೋತ್ಸಾಹಿಸಲು ದೇಶ-ವಿದೇಶಗಳಿಂದ ಹೆಚ್ಚು ಮರದ ಸಾಮಗ್ರಿಗಳು ಬರುವ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬೃಹತ್‌ ಕಂಪೆನಿಗಳನ್ನು ಆಹ್ವಾನಿಸಿ ಫ‌ರ್ನಿಚರ್‌ ಕ್ಲಸ್ಟರ್‌ ಹಾಗೂ ಕಾರ್ಕಳದಲ್ಲಿ ಶಿಲ್ಪ ಕಲೆ, ಮರದ ಕೆಲಸಗಾರ ಕ್ಲಸ್ಟರ್‌ ಅನ್ನು ಸರಕಾರದ ವತಿಯಿಂದ ಈ ವರ್ಷ ಆರಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

Advertisement

ಎಣ್ಣೆಹೊಳೆಯಲ್ಲಿ ಬುಧವಾರ 108 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಯನ್ನು ಲೋಕಾರ್ಪಣೆಗೈದು ಅವರು ಮಾತನಾಡಿದರು.

ಕರಾವಳಿ ಗ್ರೀನ್‌ ಪವರ್‌ ಆಧಾರಿತ ಕೈಗಾರಿಕ ಹಬ್‌ ಅನ್ನು ಮಾಡುವ ತೀರ್ಮಾನ ತೆಗೆದುಕೊಂಡಿದ್ದೇವೆ. ಸಾಗರ್‌ಮಾಲಾ ಯೋಜನೆಯಲ್ಲಿ ಕರಾವಳಿಯ ಎಲ್ಲ ಬಂದರುಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಹಣ ನೀಡುತ್ತಿದೆ. ರಾಜ್ಯ ಸರಕಾರದ 24 ಯೋಜನೆಗಳಿಗೆ 2,400 ಕೋ.ರೂ. ಒದಗಿಸುವಂತೆ ಪ್ರಸ್ತಾವನೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಅವೆಲ್ಲವೂ ಬಂದರೆ ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗಲಿದೆ ಎಂದರು.

ಡೀಮ್ಡ್ ಸಮಸ್ಯೆ ಬಗೆಹರಿಸಿದ್ದೇವೆ
ಕಳೆದ ಬಾರಿ ಮಂಗಳೂರಿಗೆ ಬಂದಾಗ ಡೀಮ್ಡ್ ಫಾರೆಸ್ಟ್‌ ಸಮಸ್ಯೆಯನ್ನು ತಿಂಗಳಲ್ಲಿ ಬಗೆಹರಿಸುವುದಾಗಿ ಹೇಳಿದ್ದೆ. ಅದರಂತೆ ನಡೆದುಕೊಂಡಿದ್ದೇವೆ. ಕಾನ, ಬಾಣೆ, ಕುಮ್ಕಿ, ಸೊಪ್ಪಿನ ಕಟ್ಟಗಳನ್ನು ಕೂಡ ರೈತರಿಗೆ ನೀಡಲು ಬದ್ಧರಿದ್ದು, ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

ಬಂದರುಗಳ ಅಭಿವೃದ್ಧಿ
ಕರಾವಳಿಯನ್ನು ಅತ್ಯಂತ ಆಧುನಿಕ ರೀತಿಯಲ್ಲಿ ಅಭಿವೃದ್ಧಿಗೊಳಿಸಬೇಕು ಎಂದು ಅವರಿಗೆ ಹೇಳಿದ್ದೇನೆ. ಮಂಗಳೂರು, ಕಾರವಾರ ಬಂದರುಗಳ ದೊಡ್ಡ ಪ್ರಮಾಣದ ಅಭಿವೃದ್ಧಿಗೆ ತೀರ್ಮಾನ ತೆಗೆದುಕೊಂಡಿದ್ದೇವೆ. 100 ಹೈಸ್ಪೀಡ್‌ ಬೋಟ್‌ಗಳನ್ನು ಪ್ರಥಮವಾಗಿ ನೀಡುತ್ತಿದ್ದೇವೆ ಎಂದರು.

Advertisement

ಗೆಳೆಯ, ಗುರುವಾಗಿ ಸಿಎಂ ಮಾರ್ಗದರ್ಶನ: ಸುನಿಲ್‌
ಅಧ್ಯಕ್ಷತೆ ವಹಿಸಿದ್ದ ಸಚಿವ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ತಾನು ಶಾಸಕನಾಗಿದ್ದ ಅವಧಿಯಿಂದಲೂ ನೀರಾವರಿ ತಜ್ಞ ಬೊಮ್ಮಾಯಿಯವರು ಎಲ್ಲ ರೀತಿಯ ಮಾಹಿತಿ, ಸಲಹೆ ನೀಡಿದ್ದರು. ಇಂದು ಅವರಿಂದಲೇ ಉದ್ಘಾಟನೆಗೊಂಡಿರುವುದು ಖುಷಿ ನೀಡಿದೆ. ಅವರು ಗೆಳೆಯ, ಗುರುವಾಗಿ ಮಾರ್ಗದರ್ಶನ ನೀಡಿದ್ದರಿಂದ, ಒಂದೂವರೆ ವರ್ಷದಲ್ಲಿ ಇದು ಸಾಧ್ಯವಾಗಿದೆ ಎಂದರು.

ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರೂàಳ ಮಾತ ನಾಡಿದರು. ಸಚಿವರಾದ ಅಂಗಾರ, ಆರ್‌. ಅಶೋಕ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಸುಕುಮಾರ ಶೆಟ್ಟಿ, ನಾಯಕರಾದ ಮಣಿರಾಜ್‌ ಶೆಟ್ಟಿ, ಸುರೇಶ್‌ ನಾಯಕ್‌, ಮರ್ಣೆ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಪೂಜಾರಿ, ವಿವಿಧ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು.

ತಹಶೀಲ್ದಾರ್‌ ಪ್ರದೀಪ ಕುರ್ಡೆಕರ್‌ ಸ್ವಾಗತಿಸಿ, ಹರೀಶ್‌ ನಾಯಕ್‌ ನಿರೂಪಿ ಸಿದರು. ಮುಖ್ಯಮಂತ್ರಿಗಳು ಸ್ವರ್ಣಾ ನದಿಗೆ ಬಾಗಿನ ಅರ್ಪಿಸಿದರು.

ಕರಾವಳಿಗೆ ಬರಲು 100 ಕೋಟಿ ರೂ. ಬೇಕು!
ಸಚಿವ ಸುನಿಲ್‌ ಕಾರ್ಕಳ, ಮಂಗಳೂರಿಗೆ ನೀವು ಬರಬೇಕು ಎಂದು ಆಮಂತ್ರಣ ನೀಡಿದರು. ಹೆಚ್ಚೆಂದರೆ 6ರಿಂದ 7 ಸಾವಿರ ರೂ. ವಿಮಾನ ಪ್ರಯಾಣಕ್ಕೆ ಬೇಕಾದೀತು ಎಂದು ನಾನಂದುಕೊಂಡಿದ್ದೆ. ಆದರೆ ಇಲ್ಲಿಗೆ ಬಂದ ಮೇಲೆ ಗೊತ್ತಾಯಿತು; ಕರಾವಳಿಗೆ ಬಂದರೆ ಕನಿಷ್ಠ 100 ಕೋ.ರೂ. ವೆಚ್ಚವಾಗುತ್ತದೆ. ಯಾಕೆಂದರೆ ಯಾವುದೇ ಹೊಸ ಯೋಜನೆ ಇರಲಿ ಅದು ಕಾರ್ಕಳದಲ್ಲೂ ಆಗಬೇಕು ಎಂದು ಹಠ ಹಿಡಿದು ಮಾಡಿಸಿಕೊಳ್ಳುವುದು ಸುನಿಲ್‌ ಅವರ ವೈಶಿಷ್ಟ್ಯ ಎಂದು ಬೊಮ್ಮಾಯಿ ಹೇಳಿದರು. ಸುನಿಲ್‌ಗೆ ತನ್ನ ಕ್ಷೇತ್ರದ ಜಿಲ್ಲೆಯ ಜನತೆಯ ಮೇಲಿರುವ ಕಾಳಜಿಯನ್ನು ಸಿಎಂ ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next