Advertisement

ಮೋಡ ಕಾಡತಾವ; ಆಸೆ ತೋರತಾವ..!

03:14 PM Jul 19, 2017 | Team Udayavani |

ರಾಯಚೂರು: ಸತತ ಬರದಿಂದ ಕಂಗೆಟ್ಟಿರುವ ಅನ್ನದಾತರು ಈ ಬಾರಿಯಾದರೂ ವರುಣ ಕೈ ಹಿಡಿಯುವನೇ ಎಂಬ ಆಶಾವಾದದಲ್ಲಿ ಮುಂಗಾರು ಬಿತ್ತನೆ ಜೋರಾಗಿ ಮಾಡಿದ್ದಾರೆ. ಆದರೆ, ಮೋಡಗಳಿದ್ದರೂ ಮಳೆ ಬಾರದೆ ರೈತರು ಆತಂಕದಲ್ಲಿ 
ಕಾಲದೂಡುವಂತಾಗಿದ್ದು, ಸಸಿಗಳು ತೇವವಿಲ್ಲದೇ ಬಾಡುತ್ತಿವೆ.

Advertisement

ಮುಂಗಾರು ವರ್ಷಾರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಇದೇ ಉತ್ಸಾಹದಲ್ಲಿ ರೈತರು ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆ. ಆದರೆ, ಸಸಿಗಳು ಬೆಳೆಯುವ ಹಂತದಲ್ಲಿ ಕೈಕೊಟ್ಟ ಮಳೆಗಾಗಿ ಕಾದು ಕುಳಿತಿದ್ದಾರೆ. ಆದರೆ, ನಿತ್ಯ ಮೋಡ ಕವಿದ ವಾತಾವರಣವಿದ್ದರೂ ಮಳೆ ಮಾತ್ರ ಬರದಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.

ಮಳೆ ಪ್ರಮಾಣ ಎಷ್ಟೆಷ್ಟು..?: ಮಳೆ ಎಲ್ಲ ಕಡೆ ಒಂದೇ ರೀತಿ ಬಂದಿಲ್ಲ ಎನ್ನುವುದು ಗಮನಾರ್ಹ. ಕೆಲವೆಡೆ ಆರಂಭದಲ್ಲಿ ಚನ್ನಾಗಿ ಬಂದಿದ್ದು, ಕಪ್ಪು ಮಣ್ಣು ತೇವ ಹೀರಿಕೊಂಡಿದೆ. ಆದರೆ, ಕೆಂಪು ಮಣ್ಣು ಇರುವೆಡೆ ಈಗ ಮಳೆ ಅತ್ಯಗತ್ಯ. ಜು.2ರವರೆಗೆ ಆರಿದ್ರಾ ಮಳೆ 29.3 ಮಿ.ಮೀ.ಗಳಷ್ಟು ಆಗಬೇಕಿತ್ತು. ಆದರೆ, ಈ ವೇಳೆ ಕೇವಲ 11.6 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು 
ಹಂಗಾಮಿನಲ್ಲಿ ವಾಡಿಕೆಯಂತೆ 151.2 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 161.4 ಮಿ.ಮೀ. ಮಳೆ ಸುರಿದಿದ್ದರೂ ನಿಗದಿತ ವೇಳೆಯಲ್ಲಿ ಹಾಗೂ ಎಲ್ಲ ಕಡೆ ಮಳೆ ಸುರಿದಿಲ್ಲ. ಜುಲೈನ ಈ ವೇಳೆಗೆ 14.61 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಕೇವಲ 0.51 ಮಿ.ಮೀ. ಮಳೆಯಾಗಿದೆ.  ವಾಡಿಕೆಯಂತೆ ಈ ವೇಳೆಗಾಗಲೇ ಮಳೆ ಆಗಬೇಕಿತ್ತು. ಅದರಿಂದ ಸಸಿಗಳು ಉತ್ತಮವಾಗಿ ಬೆಳೆದು ಇಳುವರಿ ಹೆಚ್ಚುತ್ತಿತ್ತು. ಆದರೆ, ಈವರೆಗೆ ವರುಣ ಕೃಪೆ ತೋರದಿರುವುದು ಅನ್ನದಾತರ ಆತಂಕಕ್ಕೆ ಕಾರಣವಾಗಿದೆ. 

ಎಲ್ಲೆಲ್ಲಿ ಎಷ್ಟು ಬಿತ್ತನೆ..?: ಜಿಲ್ಲೆಯಲ್ಲಿ ನೀರಾವರಿ, ಖುಷ್ಕಿ ಸೇರಿದಂತೆ ಒಟ್ಟು ಶೇ.89ರಷ್ಟು ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 3.55 ಲಕ್ಷ ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 1.6 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ರಾಯಚೂರು ತಾಲೂಕಿನಲ್ಲಿ ಶೇ. 54, ಮಾನ್ವಿ-ಶೇ.33, ದೇವದುರ್ಗ-ಶೇ. 21, ಲಿಂಗಸುಗೂರು- ಶೇ. 38, ಸಿಂಧನೂರು-ಶೇ.
14ರಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸರಾಸರಿ ಒಟ್ಟು ಶೇ. 31ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಇನ್ನು ಬೆಳೆವಾರು ನೋಡುವುದಾದರೆ ಜಿಲ್ಲೆಯಲ್ಲಿ ತೊಗರಿ ಶೇ. 39ರಷ್ಟು, ಸೂರ್ಯಕಾಂತಿ ಶೇ. 22, ಹೆಸರು ಶೇ. 25, ದ್ವಿದಳ ಧಾನ್ಯಗಳು ಶೇ. 38, ಹೈಬ್ರಿಡ್‌ ಸಜ್ಜೆ ಶೇ. 53, ಏಕದಳ ಧಾನ್ಯಗಳು ಶೇ. 17ರಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಭತ್ತ
1.3 ಲಕ್ಷ ಹೆಕ್ಟೇರ್‌ ಪ್ರದೇಶದ ಗುರಿ ಹೊಂದಿದ್ದು, ಅದರಲ್ಲಿ 3,528 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆಗಾಗಿ ರೈತರು ದೇವರ ಮೊರೆ ಹೋಗಿದ್ದಾರೆ. ನಾನಾ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ವರುಣ ಕೃಪೆ ತೋರಿದರೆ ಮಾತ್ರ ರೈತಾಪಿ ವರ್ಗ
ತುಸು ನೆಮ್ಮದಿ ಕಾಣಲಿದ್ದಾರೆ. ಆರಂಭದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಸಾಕಷ್ಟು ರೈತರು ಬಿತ್ತನೆ ಮಾಡಿದ್ದಾರೆ. ಆದರೆ, ಈಗ ವರುಣ ಕೃಪೆ ತೋರುತ್ತಿಲ್ಲ. ಈ ಬಾರಿ ಹತ್ತಿ ಬಿತ್ತನೆ ಹೆಚ್ಚಾಗಿದೆ. ಹತ್ತಿ, ಸೂರ್ಯಕಾಂತಿಗೆ ಹೆಚ್ಚು ತೇವಾಂಶ ಇದ್ದರೆ ಇಳುವರಿ ಚನ್ನಾಗಿ
ಬರಲಿದೆ. ಇಲ್ಲವಾದರೆ ಸಾವಿರಾರು ರೂ. ಖರ್ಚು ಮಾಡಿರುವ ರೈತರು ಪುನಃ ನಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಕೆಲ ದಿನಗಳಲ್ಲಿ
ಮಳೆ ಬಾರದಿದ್ದರೆ ಸಸಿಗಳೆಲ್ಲ ಸಾಯಲಿವೆ. ಆಗ ಬಂದರೂ ಬರ ಕಟ್ಟಿಟ್ಟ ಬುತ್ತಿ.
ಲಕ್ಷ್ಮಣಗೌಡ ಕಡಗಂದೊಡ್ಡಿ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ

Advertisement

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next