Advertisement

60 ದಿನಗಳ ಕಾಲ ಮೋಡ ಬಿತ್ತನೆಗೆ ಸಂಪುಟ ಅಸ್ತು

03:45 AM Jul 06, 2017 | |

ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯೂ ಮುಂಗಾರು ವೈಫ‌ಲ್ಯ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.

Advertisement

ಕಾವೇರಿ, ಮಲಪ್ರಭಾ, ತುಂಗಭದ್ರಾ ಜಲಾನಯನ ವ್ಯಾಪ್ತಿಯಲ್ಲಿ 60 ದಿನಗಳ ಕಾಲ ಮೋಡಬಿತ್ತನೆ ನಡೆಸಲು ನಿರ್ಧರಿಸಲಾಗಿದೆ.

ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಮೋಡಬಿತ್ತನೆ ಮಾಡಲು ಹೊಯ್ಸಳ ಪ್ರವೈಟ್‌ ಪ್ರಾಜೆಕ್ಟ್ ಸಂಸ್ಥೆಗೆ 30 ಕೋಟಿ ರೂ. ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ ಎಂದು ಹೇಳಿದರು.

ತತಕ್ಷಣದಿಂದಲೇ ಮೋಡ ಬಿತ್ತನೆ ಪ್ರಾರಂಭಿಸಲು ಅಭಿವೃದ್ಧಿ ಆಯುಕ್ತರಿಗೆ ಸೂಚನೆ ನೀಡಲಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ನೇತೃತ್ವದಲ್ಲಿ ಮೋಡಬಿತ್ತನೆ ನಡೆಯಲಿದ್ದು ಸ್ಥಳ ಗುರುತಿಸುವಿಕೆಯೂ ಆಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮುಂಗಾರು ದುರ್ಬಲ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ತೀರ್ಮಾನಿಸಲಾಗಿದೆ.  ಈಗಾಗಲೇ ಕೆಲವೆಡೆ ಕುಡಿಯವ ನೀರಿಗೂ ಸಮಸ್ಯೆ  ಉಂಟಾಗಿದೆ. ಹೀಗಾಗಿ, ಮೋಡಬಿತ್ತನೆ ಅನಿವಾರ್ಯ ಎಂದು ಸಮರ್ಥಿಸಿಕೊಂಡರು.

Advertisement

ಲೀಸ್‌ ಕಂ ಸೇಲ್‌ ಡೀಡ್‌
ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಸಂಸ್ಥೆಗಳಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಜಮಿನು ಹಂಚಿಕೆ ಸಂಬಂಧ  ಈ ಹಿಂದಿನ 99 ವರ್ಷ ಲೀಸ್‌ ಅವಧಿ ಬದಲು ಎರಡು ಎಕರೆಯೊಳಗಿನ ಜಮೀನು 10 ವರ್ಷದ ಅವಧಿಗೆ ಲೀಸ್‌ ಕಂ ಸೇಲ್‌ ಡೀಡ್‌ ಮಾಡಿ ಅಷ್ಟರಲ್ಲಿ ಉದ್ದಿಮೆ ಸ್ಥಾಪನೆಯಾದರೆ ಜಮೀನು ಹಸ್ತಾಂತರಿಸಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಸಿಯೂಟ ತಯಾರಿಸುವವರು ಹಾಗೂ ಸಹಾಯಕರಿಗೆ ತಲಾ 200 ರೂ. ಗೌರವ ಧನ ಹೆಚ್ಚಿಸಲು ಸಂಪುಟ ಒಪ್ಪಿಗೆ ನೀಡಿದೆ. ಜುಲೈ ತಿಂಗಳಿನಿಂದಲೇ ಇದು ಜಾರಿಯಾಗಲಿದೆ ಎಂದು ತಿಳಿಸಿದರು.

ಇತರೆ ತೀರ್ಮಾನ
ಚೆನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್‌ ಯೋಜನೆಯಡಿ ತುಮಕೂರು ಕೈಗಾರಿಕಾ ನೋಡ್‌ ಕೇಂದ್ರಕ್ಕಾಗಿ ವಸಂತ ನರಸಾಪುರದ 4 ನೇ ಹಂತದಲ್ಲಿ ಭೂ ಸ್ವಾಧೀನಕ್ಕೆ 2017-18 ನೇ ಸಾಲಿನಲ್ಲಿ ಕೆಐಎಡಿಬಿ ಸಂಸ್ಥೆಗೆ 400 ಕೋಟಿ ರೂ. ಒದಗಿಸಲು ಸಂಪುಟ ಒಪ್ಪಿಗೆ  ನೀಡಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್‌ಗಳಲ್ಲಿ ವೈ-ಫೈ
ರಾಜ್ಯದ 2500 ಗ್ರಾಮ ಪಂಚಾಯತಿ ಕೆಂದ್ರಗಳ ಸುತ್ತಮುತ್ತ ವೈ-ಫೈ ಸೌಲಭ್ಯ ಕಲ್ಪಿಸಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ಪಂಚಾಯಿತಿ ಕೇಂದ್ರದ ಒಂದು ಚದರ ಮೀಟರ್‌ ವ್ಯಾಪ್ತಿಯಲ್ಲಿ ವೈ-ಫೈ ಸೌಲಭ್ಯ ದೊರೆಯಲಿದ್ದು, ಪ್ರತಿ ವ್ಯಕ್ತಿ 100 ಎಂಬಿವರೆಗೂ ಡಾಟಾ ಬಳಸುವ ಅವಕಾಶ ಇರಲಿದೆ. ಬಿಎಸ್‌ಎನ್‌ಎಲ್‌ ಮೂಲಕ 2017-18 ನೇ ಸಾಲಿನಿಂದ 2019-20 ನೇ ಸಾಲಿನವರೆಗೆ ವ್ಯವಸ್ಥೆ ಕಲ್ಪಿಸಲು 79.50 ಕೋಟಿ ರೂ. ಒದಗಿಸಲಾಗಿದೆ.

ಐದು ದಿನ ಹಾಲು
ಒಂದರಿಂದ ಹತ್ತನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ಐದು ದಿನ ಹಾಲು ಪೂರೈಕೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದೇ ಸಂದರ್ಭದಲ್ಲಿ ಮೈಸೂರು ಮತ್ತು ರಾಯಚೂರಿನಲ್ಲಿ ಪ್ರಾಯೋಗಿಕವಾಗಿ ಸುವಾಸಿತ ಹಾಲು ಪೂರೈಕೆಗೂ ಸಂಪುಟ ನಿರ್ಧರಿಸಿದೆ. ಜುಲೈ 17 ರಿಂದಲೇ ಯೋಜನೆ ಜಾರಿಯಾಗಲಿದ್ದು, ಯೋಜನೆ ವಿಸ್ತರಣೆಗೆ 285 ಕೋಟಿ ರೂ. ಹೆಚ್ಚುವರಿಯಾಗಿ ಮೀಸಲಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next