Advertisement

ವಿತರಣೆಯಾಗದೆ ತಾ.ಪಂ. ಕಚೇರಿಯಲ್ಲಿ ರಾಶಿ ಬಿದ್ದ ಬಟ್ಟೆ  ಬ್ಯಾಗ್‌ಗಳು!

01:00 AM Feb 24, 2019 | Team Udayavani |

ಕಾರ್ಕಳ: ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣದ ಕುರಿತಂತೆ ಜಾಗೃತಿ, ಯೋಜನೆಗಳು ಆಗುತ್ತಲೇ ಇರುತ್ತವೆ. ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಂದಾಗುವವರು ಬಹಳ ವಿರಳ. ಇದಕ್ಕೊಂದು ತಾಜಾ ಉದಾಹರಣೆ ಕಾರ್ಕಳ ತಾಲೂಕು ಪಂಚಾಯತ್‌ನಲ್ಲಿ ವಿತರಣೆಯಾಗದೇ ಉಳಿಸಿಕೊಂಡಿರುವ ಬಟ್ಟೆ ಬ್ಯಾಗ್‌ಗಳು.

Advertisement

ಮನವಿಗೆ ಸ್ಪಂದನೆ
ಗ್ರಾ.ಪಂ. ವ್ಯಾಪ್ತಿಯ ಜನರು ಬಟ್ಟೆ ಚೀಲ ಗಳನ್ನೇ ಬಳಸಬೇಕೆಂಬ ನಿಟ್ಟಿನಲ್ಲಿ ಗಾಂಧಿ ಜಯಂತಿ ಸಂದರ್ಭ ತಾ.ಪಂ. ಬಟ್ಟೆ ಚೀಲ ಒದಗಿಸಿ ಕೊಡುವಂತೆ ಕೆಲವೊಂದು ಸಂಘ-ಸಂಸ್ಥೆ, ಬ್ಯಾಂಕ್‌ಗಳಿಗೆ ಮನವಿ ಮಾಡಿತ್ತು.  ಈ ಮನವಿಗೆ ಸ್ಪಂದಿಸಿ ಸಿಂಡಿಕೇಟ್‌ ಬ್ಯಾಂಕ್‌ ಸುಮಾರು 40 ಸಾವಿರ ರೂ. ಮೊತ್ತದ ಬಟ್ಟೆ ಚೀಲಗಳನ್ನು ಒದಗಿಸಿದ್ದವು.   

ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣ ಮತ್ತು ಬಟ್ಟೆ ಚೀಲ ಬಳಕೆ ಕುರಿತಂತೆ ಕಾರ್ಕಳ ತಾಲೂಕಿನಾದ್ಯಂತ ಡಿಸೆಂಬರ್‌ನಲ್ಲಿ ಪ್ರಚಾರ ಕಾರ್ಯ ನಡೆದಿತ್ತು. ಪ್ರಚಾರ ಕಾರ್ಯವನ್ನು ಅತ್ಯಂತ ಮುತುವರ್ಜಿಯಿಂದ ಮಾಡಿದ ತಾಲೂಕು ಪಂಚಾಯತ್‌ ಬಟ್ಟೆ ಚೀಲಗಳನ್ನು ವಿತರಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗಿದೆ.  

ಬಟ್ಟೆಚೀಲಗಳನ್ನು ಸಂಘ-ಸಂಸ್ಥೆಗಳು ತಾ.ಪಂ. ಹಸ್ತಾಂತರಿಸಿದ್ದು, ತಾ.ಪಂ. 60 ಶೇ. ಬಟ್ಟೆಗಳನ್ನು ಮಾತ್ರ ವಿತರಣೆ ಮಾಡಿ ಸುಮ್ಮನಾಗಿದೆ. ಬಳಿಕದ ದಿನಗಳಲ್ಲಿ ಬಟ್ಟೆ ಚೀಲವನ್ನು ವಿರತಣೆ ಮಾಡುವ ಗೊಡವೆಗೆ ಹೋಗದೇ ನಿರ್ಲಕ್ಷ ವಹಿಸಿತ್ತು. ಹೀಗಾಗಿ ಯೋಜನೆಯ ಆರಂಭದಲ್ಲಿ ಕಂಡು ಬಂದ ಉತ್ಸಾಹ ಈಗ ತೋರುತ್ತಿಲ್ಲ ಎಂದು ನಾಗರಿಕರೊಬ್ಬರು ಬೊಟ್ಟು ಮಾಡಿದ್ದಾರೆ.  

ಫ್ಲೆಕ್ಸ್‌ ವಿಚಾರದಲ್ಲಿ ದ್ವಂದ್ವ ನಿಲುವು
ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧಿಸಿ ಹೊರಡಿಸಲಾದ ಆದೇಶದ ಮೇರೆಗೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯವರು ಗ್ರಾ.ಪಂ. ಪಿಡಿಒಗಳಿಗೆ ನೋಟಿಸ್‌ ಜಾರಿ ಮಾಡಿದ್ದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸುವುದು ಮತ್ತು ಹೊಸದಾಗಿ ಅಳವಡಿಸಲು ಅನುಮತಿ ನೀಡುವಂತಿಲ್ಲ ಎಂದು ನೋಟಿಸ್‌ನಲ್ಲಿ ಹೇಳಿದ್ದರು. ಆದರೆ ಕೆಲವು ಗ್ರಾ.ಪಂ. ಪಿಡಿಓ ಗಳು ತಮ್ಮ ವ್ಯಾಪ್ತಿಯಲ್ಲಿ  ಫ್ಲೆಕ್ಸ್‌ ಸಂಪೂರ್ಣವಾಗಿ ನಿಷೇಧಿಸಿದ್ದರೆ, ಇನ್ನು ಕೆಲವೆಡೆ ಬ್ಯಾನರ್‌ಗಳಿಗೆ ಅವಕಾಶ ಮಾಡಿದ್ದಾರೆ. ಹೀಗಾಗಿ ಏಕರೂಪದ ಕಾನೂನು ಇಲ್ಲವೇ ಎಂಬ ಪ್ರಶ್ನೆ ಎದ್ದಿದೆ.  

Advertisement

 ಶೀಘ್ರ ವಿತರಣೆ
ಕೆಲವೊಂದು ಗ್ರಾ.ಪಂ.ಗಳು ದಾನಿಗಳಿಂದ ಅಥವಾ ಪಂಚಾಯತ್‌ ಅನುದಾನದಿಂದಬಟ್ಟೆ ಚೀಲಗಳನ್ನು ಈಗಾಗಲೇ ವಿತರಿಸಿವೆ. ಅನುದಾನ ಕಡಿಮೆ ಇರುವ ಪಂಚಾಯತ್‌ಗಳಿಗೆ ತಾ.ಪಂ.ನಲ್ಲಿರುವ ಬಟ್ಟೆ ಚೀಲಗಳನ್ನು ಶೀಘ್ರವಾಗಿ ವಿತರಿಸಲಾಗುವುದು.
– ಮಾಲಿನಿ ಜೆ. ಮಲ್ಯ ಅಧ್ಯಕ್ಷರು ತಾ.ಪಂ. , ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next