Advertisement
ಹಾಸನ-ಸಕಲೇಶಪುರ-ಮಾರನಹಳ್ಳಿ ನಡುವಿನ ಸುಮಾರು 56 ಕಿ.ಮೀ. ದೂರದ ರಸ್ತೆಯನ್ನು ಮೊದಲಿಗೆ ಚತುಷ್ಪಥ ರಸ್ತೆ ಕಾಮ ಗಾರಿ ಮಾಡಲು ಐಸೋಲೆಕ್ಸ್ ಕಂಪೆನಿ ಗುತ್ತಿಗೆ ಪಡೆದಿತ್ತು. ಈ ಕಂಪೆನಿ ದಿವಾಳಿಯಾದ್ದರಿಂದ ಉಪ ಗುತ್ತಿಗೆ ಪಡೆದಿದ್ದ ರಾಜ್‌ಕಮಲ್ ಕಂಪೆನಿಯೇ ಕಾಮಗಾರಿ ಮುಂದು ವರಿಸಲು ಒಪ್ಪಿಕೊಂಡಿದೆ. ಈಗ ಕಾಮಗಾರಿ ಪ್ರಾರಂಭವಾಗಿ 4 ವರ್ಷ ಗಳಾಗುತ್ತ ಬಂದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿರುವುದು ಜನರಲ್ಲಿ ಅಸಮಾಧಾನ ಸೃಷ್ಟಿಸಿದೆ.
ಹಾಸನ-ಸಕಲೇಶಪುರ ನಡುವಿನ 40 ಕಿ.ಮೀ. ದೂರದ ನೇರ ರಸ್ತೆ ಶೇ.50-60ರಷ್ಟು ಮುಗಿಸಲು 4 ವರ್ಷ ತೆಗೆದುಕೊಳ್ಳಲಾಗಿದೆ. ಇನ್ನು ಈ ಮಾರ್ಗದಲ್ಲಿ ಕಾಮಗಾರಿ ಮುಗಿಸದೆ ಏಕಾಏಕಿ ಸಕಲೇಶಪುರ ಹಾಗೂ ಮಾರನಹಳ್ಳಿ ನಡುವಿನ ಪಶ್ಚಿಮಘಟ್ಟದ ಕಡಿದಾದ ತಿರುವಿನ ರಸ್ತೆಯ ಕಾಮಗಾರಿ ಮುಗಿಸಲು 6 ತಿಂಗಳು ಕಾಲಾವಕಾಶ ಕೇಳಿದ್ದು, ಹೆದ್ದಾರಿ ಮುಚ್ಚಲು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಮೊದಲಿಗೆ ಹಾಸನ-ಸಕಲೇಶಪುರ ನಡುವಿನ ಕಾಮಗಾರಿ ಮುಗಿಸಿದ ಬಳಿಕ ಸಕಲೇಶಪುರ ಹಾಗೂ ಮಾರನಹಳ್ಳಿ ನಡುವಿನ ಕಾಮಗಾರಿಗೆ ರಸ್ತೆ ಬಂದ್ ಮಾಡಲಿ ಎಂದಿದ್ದಾರೆ. ಕಾಮಗಾರಿ ಮುಗಿಸದೆ ಏಕಾಏಕಿ ಸಕಲೇಶಪುರ ಮಾರನಹಳ್ಳಿ ನಡುವೆ ಹೆದ್ದಾರಿ ಬಂದ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.