Advertisement
ಅಚ್ಚರಿಯ ಸಂಗತಿ ಅಂದರೆ, ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ ಸ್ಥಾನಗಳಿಸುವ ದ. ಕನ್ನಡ ಜಿಲ್ಲೆಯ 18 ಮತ್ತು ಉಡುಪಿ ಜಿಲ್ಲೆಯ 9 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬನೂ ಪೂರ್ಣಕಾಲಿಕ ಶಿಕ್ಷಕರಿಲ್ಲ. ಹತ್ತಿರದ ಶಾಲೆಗಳಿಂದ ಡೆಪ್ಯೂಟೇಶನ್‌ನಡಿ ಆಗಮಿಸುವ ಶಿಕ್ಷಕರೇ ಆಧಾರ. ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕರನ್ನು ಹೊಂದಿರುವ ಶಾಲೆಗಳಿಗೆ ಪೂರ್ಣಕಾಲಿಕ ಶಿಕ್ಷಕರನ್ನು ನೇಮಕಗೊಳಿಸುವ ಪ್ರಕ್ರಿಯೆಯನ್ನೇ ಹಲವು ವರ್ಷಗಳಿಂದ ನಡೆಸದಿರುವುದು ಇದಕ್ಕೆ ಕಾರಣ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಮಂಗಳೂರು ದಕ್ಷಿಣ ಬ್ಲಾಕ್ ಹೊರತುಪಡಿಸಿ ಉಳಿದ ಎಲ್ಲ ಬ್ಲಾಕ್‌ಗಳಲ್ಲಿ ಪೂರ್ಣಕಾಲಿಕ ಶಿಕ್ಷಕರ ನೇಮಕಾತಿ ಆಗದ ಶಾಲೆಗಳಿವೆ. 2017-18ರಲ್ಲಿ 16 ಶಾಲೆಗಳಲ್ಲಿ ಪೂರ್ಣಕಾಲಿಕ ಶಿಕ್ಷಕರು ಇರಲಿಲ್ಲ. 2018-19ರಲ್ಲಿ ಇದು 18ಕ್ಕೆ ಏರಿದೆ. ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆ ಹೆಚ್ಚುತ್ತಿದೆ. ಎಲ್ಲೆಲ್ಲಿ ಇಲ್ಲ?
ಸುಳ್ಯ ತಾಲೂಕಿನ ಕಮಿಲ, ಮೈತಡ್ಕ, ಕರಂಗಲ್ಲು, ಪೈಕ, ಹೇಮಲ, ಕಟ್ಟಗೋವಿಂದ ನಗರ, ಮುಗೇರು, ರಂಗತ್ತಮಲೆ ಪ್ರಾಥಮಿಕ ಶಾಲೆಗಳಲ್ಲಿ ಪೂರ್ಣಕಾಲಿಕ ಶಿಕ್ಷಕರಿಲ್ಲ. ಇದರಲ್ಲಿ ರಂಗತ್ತಮಲೆ ಶಾಲೆ ಈ ಬಾರಿ ಮಕ್ಕಳು-ಶಿಕ್ಷಕರು ಇಲ್ಲದೆ ಬೀಗಮುದ್ರೆ ಕಂಡಿದೆ. ಪುತ್ತೂರು ತಾಲೂಕಿನಲ್ಲಿ ಪಲ್ಲತ್ತಾರು, ಕೋಂರ್ಬಡ್ಕ, ಕುಮಾರಮಂಗಲ, ಬಲ್ಯಪಟ್ಟೆ, ಇಡ್ಯಡ್ಕ, ಬೆಳ್ತಂಗಡಿ ತಾಲೂಕಿನ ಬದಿಪಲ್ಕೆ, ಕುಂಟಲಪಲ್ಕೆ ಪಂಡಿಂಜ್ಯವಾಲ್ಯ, ಬಂಟ್ವಾಳದಲ್ಲಿ ಅಮೈ, ಮಂಗಳೂರು ಉತ್ತರ ಬ್ಲಾಕ್‌ನ ಉಳೆಪಾಡಿ ಶಾಲೆಗಳದ್ದೂ ಇದೇ ಸ್ಥಿತಿ.
Related Articles
ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರಿನ 9 ಶಾಲೆಗಳು ಪೂರ್ಣಕಾಲಿಕ ಶಿಕ್ಷಕರಿಲ್ಲದ ಪಟ್ಟಿಯಲ್ಲಿ ಸೇರಿವೆ. ಬ್ರಹ್ಮಾವರ, ಕಾರ್ಕಳ, ಉಡುಪಿಯಲ್ಲಿ ಆ ಸಮಸ್ಯೆ ಇಲ್ಲ ಅನ್ನುತ್ತಿದೆ ಇಲಾಖೆ. 2017-18ರಲ್ಲಿ ಜಿಲ್ಲೆಯಲ್ಲಿ 5 ಶಾಲೆ ಗಳು ಶೂನ್ಯ ಶಿಕ್ಷಕರನ್ನು ಹೊಂದಿದ್ದವು. ಈ ವರ್ಷ ಎರಡು ಬ್ಲಾಕ್‌ಗಳಲ್ಲಿ ಆ ಸಂಖ್ಯೆ 9ಕ್ಕೆ ಏರಿದೆ. 2016-17ರಲ್ಲಿ ಶಿಕ್ಷಕರ ಬೇಡಿಕೆಯೇ ಇಲ್ಲದ ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿ ಸೇರಿತ್ತು. 2017-18ರಲ್ಲಿ 67 ಶಿಕ್ಷಕರ ಕೊರತೆ ಕಂಡಿತ್ತು. ಈ ಸಾಲಿನಲ್ಲಿ ಆ ಸಂಖ್ಯೆ 85ಕ್ಕೂ ಮೀರಿದೆ.
Advertisement
ಡೆಪ್ಯುಟೇಶನ್‌ಗೆ ಮೊರೆ!ಪೂರ್ಣಕಾಲಿಕ ಶಿಕ್ಷಕರು ಇಲ್ಲದೆಡೆ ತಾತ್ಕಾಲಿಕವಾಗಿ ಹತ್ತಿರದ ಶಾಲೆಗಳಿಂದ ಡೆಪ್ಯುಟೇಶನ್‌ನಡಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಈ ಎರವಲು ನೀತಿಯಿಂದ ಎರಡು ಶಾಲೆಗಳಲ್ಲೂ ಪಾಠ ಪ್ರವಚನಕ್ಕೆ ತೊಂದರೆ ಆಗುತ್ತಿದೆ. ತಾತ್ಕಾಲಿಕ ಎಂದು ನಿಯೋಜನೆ ಮಾಡಿ ಕೊನೆಗೆ ಅದೇ ಶಾಲೆಯಲ್ಲಿ ನಿವೃತ್ತಿ ಹೊಂದುವ ತನಕವೂ ಮುಂದುವರಿದ ಉದಾಹರಣೆಗಳಿವೆ. ಅನುಮತಿ ನೀಡಿದ್ದೇವೆ
ದ. ಕನ್ನಡ ಜಿಲ್ಲೆಯಲ್ಲಿ ಅಗತ್ಯವಿರುವ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಪೂರ್ಣಕಾಲಿಕ ಶಿಕ್ಷಕರ ನೇಮಕ ವಾಗುವವರೆಗೂ ಎಸ್‌ಡಿಎಂಸಿ ಮೂಲಕ 524 ಮಂದಿ ಅತಿಥಿ ಶಿಕ್ಷಕರನ್ನು ನೇಮಿಸಲು ಅನುಮತಿ ನೀಡಲಾಗಿದೆ. ಇವರಿಗೆ ಶಿಕ್ಷಣ ಇಲಾಖೆ ಮೂಲಕವೇ ವೇತನ ಪಾವತಿಸಲಾಗುತ್ತಿದೆ.
– ವೈ. ಶಿವರಾಮಯ್ಯ, DDPI, ಮಂಗಳೂರು ತಾತ್ಕಾಲಿಕ ಪ್ರಕ್ರಿಯೆ
ಪೂರ್ಣಕಾಲಿಕ ಶಿಕ್ಷಕರು ಇಲ್ಲದ ಶಾಲೆಗಳಿಗೆ ಡೆಪ್ಯುಟೇಶನ್ ನೆಲೆಯಲ್ಲಿ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ನೇಮಕಾತಿ ಆದ ಬಳಿಕ ಅವರು ಮೂಲ ಶಾಲೆಗೆ ಮರಳುತ್ತಾರೆ. ಅದೊಂದು ತಾತ್ಕಾಲಿಕ ಪಕ್ರಿಯೆ. ಕುಂದಾಪುರದಲ್ಲಿ ಒಂದೆರಡು ಶಾಲೆಗಳಲ್ಲಿ ಪೂರ್ಣಕಾಲಿಕ ಶಿಕ್ಷಕರು ಇಲ್ಲದ ಕಾರಣ, ನಿಯೋಜನೆ ಮೇರೆಗೆ ಶಿಕ್ಷಕರನ್ನು ನೇಮಿಸಲಾಗಿದೆ. ಉಳಿದೆಡೆ ಅಂತಹ ಸಮಸ್ಯೆ ಇಲ್ಲ.
– ಆಶೋಕ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ, ಕುಂದಾಪುರ — ಕಿರಣ್ ಪ್ರಸಾದ್ ಕುಂಡಡ್ಕ