ಉಳ್ಳಾಲ: ಬಹುಸಂಸ್ಕೃತಿಯ ತುಳುನಾಡಿನ ಅನನ್ಯತೆಯನ್ನು ಉಳಿಸಿ ಬೆಳೆಸುವ ಕಾರ್ಯ ಸಾಹಿತ್ಯ ಲೋಕದಲ್ಲಿ ನಡೆಯಬೇಕಾಗಿದೆ ಎಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಬಿ.ಎಂ. ರೋಹಿಣಿ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಇದರ ಆಶ್ರಯದಲ್ಲಿ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಧಕರಿಗೆ ಸಮ್ಮಾನ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ, ಭಾಷಾ ಸೌಹಾರ್ದತೆ ಇಂದಿನ ಅಗತ್ಯವಾಗಿದ್ದು, ಭಾಷಾ ಸಾಮರಸ್ಯದ ಹಿನ್ನೆಲೆಯಲ್ಲಿ ಕನ್ನಡ ನಾಡು ನಿರ್ಮಾಣವಾಗಬೇಕಾಗಿದೆ ಎಂದರು. ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಸತ್ಯನಾರಾಯಣ ಮಲ್ಲಿಪಟ್ಣ ಸಮಾರೋಪ ಭಾಷಣ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್‌ನ ದ.ಕ. ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಅಧ್ಯ ಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಅಜಿಲಾಡಿ ಬೀಡು ಭಾಸ್ಕರ ಶೆಟ್ಟಿ, ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ನಯೀಮ್ ಹಮೀದ್, ಕನ್ನಡ ಸಾಹಿತ್ಯ ಪರಿಷತ್‌ನ ಮಂಗಳೂರು ತಾಲೂಕು ಘಟಕದ ಅಧ್ಯಕ್ಷೆ ವಿಜಯ ಲಕ್ಷ್ಮೀ ಬಿ. ಶೆಟ್ಟಿ, ಜಿಲ್ಲಾ ಗೌರವ ಕೋಶಾಧ್ಯಕ್ಷೆ ಪೂರ್ಣಿಮಾ ರಾವ್ ಪೇಜಾವರ್, ಕಾರ್ಯದರ್ಶಿ ಡಾ| ಪದ್ಮನಾಭ ಭಟ್ ಎಕ್ಕಾರು ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರು ತಾಲೂಕು ಸಾಹಿತ್ಯ ಪರಿಷತ್‌ನ ಕೋಶಾಧಿಕಾರಿ ಪ್ರೊ| ಪಿ. ಕೃಷ್ಣ ಮೂರ್ತಿ ಸ್ವಾಗತಿಸಿದರು. ಅಬ್ದುಲ್ ಅಝೀಝ್ ಹಕ್ ವಂದಿಸಿದರು. ಕೆನರಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಘು ಇಡ್ಕಿದು ಕಾರ್ಯಕ್ರಮ ನಿರ್ವಹಿಸಿದರು.
ಸಾಧಕರಿಗೆ ಸಮ್ಮಾನ
ಸಾಹಿತ್ಯ ಕ್ಷೇತ್ರ- ಕೃಷ್ಣ ಶೆಟ್ಟಿ ಕುಡುಮಲ್ಲಿಗೆ, ನಿವೃತ್ತ ಯೋಧ- ನಾರಾಯಣ ಕೆ.ಸಿ., ಭಾರತ್ ಸೇವಾದಳ- ಜೂಲಿಯೆಟ್ ಬಿ. ಪಿಂಟೋ, ಪರಿಸರ ಪ್ರೇಮಿ- ಮಾಧವ ಉಳ್ಳಾಲ್, ವೈದ್ಯಕೀಯ- ಡಾ| ಸಿ.ಲೆನಿಟಾ ಡಿ’ಸೋಜಾ, ಸಮಾಜ ಸೇವೆ- ಕೆ. ಹುಸೈನ್ ಕುಂಞಿಮೋನು, ಯೋಗಾಸನ- ಬಿ. ಬಾಳಪ್ಪ ಪೂಜಾರಿ ಹಾಗೂ ಸಂಘಟಕರಾದ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು,ಕಾರ್ಯದರ್ಶಿ ಸೌಮ್ಯಾ ಆರ್. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.