Advertisement

ಮುಚ್ಚಿದ ಶಾಲೆ ಪುನಾರಂಭ?

04:06 PM May 11, 2019 | Team Udayavani |

ಕುಮಟಾ: ವಿದ್ಯಾರ್ಥಿಗಳ ಹಾಜರಾತಿ ಕೊರತೆ ಕಾರಣದಿಂದಾಗಿ 2014-15ನೇ ಸಾಲಿನಲ್ಲಿ ಮುಚ್ಚಲ್ಪಟ್ಟಿದ್ದ ದೇವಗುಂಡಿ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಪುನಾರಂಭಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರಕ್ರಿಯೆಗಳು ನಡೆಯುತ್ತಿದ್ದು, ಇದರಿಂದ ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ.

Advertisement

ತಾಲೂಕಿನ ಕಲಭಾಗ ಗ್ರಾಪಂ ವ್ಯಾಪ್ತಿಯ ಪುಟ್ಟ ಗ್ರಾಮ ದೇವಗುಂಡಿ. ಸುಮಾರು 40 ಮನೆಗಳಿರುವ ಈ ಗ್ರಾಮದಲ್ಲಿ ಒಂದು ಶಾಲೆಯಿತ್ತು. 1958ರಲ್ಲಿ ಅಂದರೆ 60 ವರ್ಷಗಳ ಹಿಂದೆ ಸ್ಥಾಪನೆಯಾದ ಈ ಶಾಲೆಯಲ್ಲಿ ಒಂದರಿಂದ 4ನೇ ತರಗತಿಗಳು ನಡೆಯುತ್ತಿತ್ತು. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿದ್ದು, ಶಿಕ್ಷಕ, ಸೈನಿಕ ಸೇರಿದಂತೆ ಇನ್ನಿತರ ಸರಕಾರಿ ಹುದ್ದೆಗಳು, ಪ್ರತಿಷ್ಠಿತ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೀಗೆ 6 ದಶಕಗಳ ಕಾಲ ನಿರಂತರವಾಗಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುತ್ತಾ ಬಂದಿರುವ ಈ ಶಾಲೆಯನ್ನು ಹಾಜರಾತಿ ಕೊರತೆ ಕಾರಣದಿಂದಾಗಿ ಏಕಾಏಕಿ ಮುಚ್ಚಲ್ಪಟ್ಟಿದ್ದರಿಂದ ಗ್ರಾಮದ ಜನರಿಗೆ ತೀವ್ರ ನೋವನ್ನುಂಟುಮಾಡಿತ್ತು. ಈ ಪ್ರಕ್ರಿಯೆ ತಡೆಯಲು ಗ್ರಾಮಸ್ಥರು ಹಲವು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಊರಿನ ಮಕ್ಕಳು ಅನಿವಾರ್ಯವಾಗಿ ಪಕ್ಕದ ಕಲಭಾಗ ಶಾಲೆಗೆ ಹೋಗುವ ಪರಿಸ್ಥಿತಿ ಎದುರಾಗಿತ್ತು. ಮಳೆಗಾಲದಲ್ಲಿ ಚಿಕ್ಕ ಮಕ್ಕಳು ದಾರಿ ಮಧ್ಯೆಯಲ್ಲಿನ ಸೇತುವೆ ದಾಟಿ ಹೋಗುವುದು ತುಂಬಾ ಕಷ್ಟಕರದ್ದಾಗಿದೆ. ಕಳೆದ 4 ವರ್ಷಗಳಲ್ಲಿ ಚಿಕ್ಕ ಮಕ್ಕಳ ಪರಿಸ್ಥಿತಿ ಕಂಡ ಊರಿನ ಗ್ರಾಮಸ್ಥರು ಶಾಲೆಯನ್ನು ಪುನಃ ಆರಂಭಿಸಲೇಬೇಕೆಂದು ಪಣತೊಟ್ಟು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದರು.

ಅದಲ್ಲದೇ, ಈ ಬಾರಿ ಸ್ಥಳೀಯ ಅಂಗನವಾಡಿಯಲ್ಲಿ ಕಲಿಯುತ್ತಿರುವ ನಾಲ್ಕು ವಿದ್ಯಾರ್ಥಿಗಳು ಒಂದನೇ ತರಗತಿಗೆ ಸೇರುತ್ತಿದ್ದು, ಅವರೂ ಸೇರಿದಂತೆ ಸುಮಾರು 12 ವಿದ್ಯಾರ್ಥಿಗಳು ಶಾಲೆಗೆ ಸೇರಲು ಉತ್ಸುಕರಾಗಿದ್ದಾರೆ. ಇದರಿಂದ ಶಾಲೆ ಪುನಾರಂಭಕ್ಕೆ ಆನೆಬಲ ಸಿಕ್ಕಂತಾಗಿದೆ. ಬಿಇಒ ಈ ಕುರಿತು ಉಪನಿರ್ದೇಶಕರಿಗೆ ಆದೇಶಕ್ಕಾಗಿ ಪತ್ರ ಬರೆದಿದ್ದು, ಅವರ ಆದೇಶದಂತೆ ಪರಿಶೀಲನೆಗಾಗಿ ಅಧಿಕಾರಿಗಳನ್ನು ಕಳುಹಿಸಿಕೊಡಲಾಗಿದೆ. ಗ್ರಾಮಸ್ಥರ ಅಭಿಪ್ರಾಯ ಪಡೆದು ಇಲ್ಲಿನ ವಸ್ತುಸ್ಥಿತಿ ಅವಲೋಕಿಸಿದ ಅಧಿಕಾರಿಗಳ ತಂಡ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಶಾಲೆ ತೆರೆಯುವ ಕುರಿತು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next