ಬೆಂಗಳೂರು: ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಗೆ ಕೊನೆಗೂ ಪೂರ್ಣ ವಿರಾಮ ಬಿದ್ದಿದೆ. ಇದರೊಂದಿಗೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ, ಅತೃಪ್ತರೂ ಸೇರಿದಂತೆ ಎಲ್ಲ ಶಾಸಕರಿಗೆ ಅಲ್ಪ”ವಿರಾಮ’ವೂ ದೊರಕಿದೆ. ಹೌದು, ಇಡೀ ಪ್ರಹಸನದಲ್ಲಿ ವಾಸ್ತವವಾಗಿ ಬಡವಾದವರು ಶಾಸಕರು. ಮೇಲ್ನೋಟಕ್ಕೆ ಐಷಾರಾಮಿ ಹೋಟೆಲ್‌ನಲ್ಲಿ ಜೀವನ, ಮನಸ್ಸನ್ನು ಹಗುರಗೊಳಿಸಲು ಮೆಡಿಟೇಷನ್ ಕೋರ್ಸ್, ಸಂಜೆಯಾದರೆ ಲೈವ್‌ಬ್ಯಾಂಡ್ ಶೋ, ಕೈಗೊಂದು-ಕಾಲಿಗೊಂದು ಆಳು ಎಲ್ಲವೂ ಇದ್ದವು. ಒಂದೊಂದು ಕೊಠಡಿಗೆ ಹತ್ತಾರು ಸಾವಿರ ರೂ.ಬಾಡಿಗೆ, ಭೋಜನಕ್ಕೆ ಎರಡು- ಮೂರು ಸಾವಿರ ರೂ.ಆದರೆ, ಅದೆಲ್ಲವನ್ನೂ ಅನುಭವಿಸುವ ಸ್ಥಿತಿಯಲ್ಲಿ ಅವರ್ಯಾರೂ ಇರಲಿಲ್ಲ!
ಕಾರಣ- ಅವರ್ಯಾರೂ ಜಾಗ ಬಿಟ್ಟು ಕದಲುವಂತಿರಲಿಲ್ಲ. ಕುಟುಂಬದ ಸದಸ್ಯರಿಂದಲೂ ದೂರ ಉಳಿದಿದ್ದರು. ಕುಳಿತರೂ-ನಿಂತರೂ ತಮ್ಮ ಪಕ್ಷಗಳ ನಾಯಕರು ಅವರನ್ನು ಅನುಮಾನದಿಂದಲೇ ನೋಡುತ್ತಿದ್ದರು. ಮೊಬೈಲ್ ಬಳಕೆ, ಕರೆ ಮಾಡುವ ದೂರವಾಣಿ ಸಂಖ್ಯೆಗಳು, ಅವರ ಓಡಾಟ, ಭೇಟಿಯಾಗುವ ಜನ ಸೇರಿದಂತೆ ಎಲ್ಲವೂ ಕಣ್ಗಾವಲಿನಲ್ಲಿತ್ತು. ಹಾಗಾಗಿ, ಇದೊಂದು ರೀತಿ ಶಾಸಕರ ಪಾಲಿಗೆ ವನವಾಸವೇ ಆಗಿತ್ತು. ಇದೆಲ್ಲದರ ನಡುವೆ ಅತ್ತ ಜನರ ಕೆಂಗಣ್ಣಿಗೂ ಗುರಿಯಾಗಿದ್ದರು.
ಯಾಕೆಂದರೆ, ಕ್ಷೇತ್ರಕ್ಕೆ ಭೇಟಿ ನೀಡಿ ಅಹವಾಲು ಆಲಿಸುವಂತಿರಲಿಲ್ಲ. ಇತ್ತ ಕಾರ್ಯಕರ್ತರನ್ನು ಭೇಟಿಯಾಗುವಂತೆಯೂ ಇರಲಿಲ್ಲ. ಸ್ವತಂತ್ರವಾಗಿ ರೆಸಾರ್ಟ್ ಬಿಟ್ಟು ಹೊರಗೆ ಬರುವಂತೆಯೂ ಇರಲಿಲ್ಲ. ಕೆಲವರ ಮೊಬೈಲ್ ಫೋನ್‌ಗಳನ್ನು ಕೂಡ ತೆಗೆದಿಟ್ಟುಕೊಂಡ ಉದಾಹರಣೆಗಳು ಇವೆ. ಇದೆಲ್ಲದರಿಂದ ಬೇಸತ್ತ ಶಾಸಕರು, “ಸರ್ಕಾರ ಉಳಿಯಲಿ ಅಥವಾ ಉರುಳಲಿ. ಅಂತಿಮವಾಗಿ ನಮ್ಮನ್ನು ಬಿಟ್ಟು ಬಿಡಲಿ…’ ಎಂದು ಪರಸ್ಪರ ಹೇಳಿಕೊಳ್ಳುತ್ತಿದ್ದರು. ಈ ನಡುವೆ ಶನಿವಾರ ಮತ್ತು ಭಾನುವಾರ ಕೆಲ ಶಾಸಕರಿಗೆ ಕೊಂಚ “ರಿಲ್ಯಾಕ್ಸ್’ ಸಿಕ್ಕಿತ್ತು. ಆದರೆ, ಸೋಮವಾರ ಮತ್ತದೆ ಕಥೆ.
ನಾಂದಿ ಹಾಡಿದ ಅತೃಪ್ತರು: ಹತ್ತು ಜನ ಅತೃಪ್ತ ಶಾಸಕರು ಮುಂಬೈಗೆ ಹಾರಿ ಹೆಚ್ಚು-ಕಡಿಮೆ ಹದಿನಾಲ್ಕು ದಿನಗಳಾಗಿದ್ದವು. ಅಂದಿನಿಂದ ಅತಂತ್ರ ಸ್ಥಿತಿ ಉಂಟಾಗಿತ್ತು. “ಆಪರೇಷನ್’ ಭೀತಿ ಹಿನ್ನೆಲೆಯಲ್ಲಿ ಎಲ್ಲ ಶಾಸಕರನ್ನು ವಿವಿಧ ರೆಸಾರ್ಟ್ ಗಳಿಗೆ ಕೊಂಡೊಯ್ದು, ಹದ್ದಿನ ಕಣ್ಣಿನಲ್ಲಿ ಇಡಲಾಗಿತ್ತು. ನಾಯಕರ ಕಣ್ಣಳತೆಯಲ್ಲೇ ಓಡಾಡುತ್ತಿದ್ದ ಈ ಜನಪ್ರತಿನಿಧಿಗಳು, ಪ್ರತಿಯೊಂದಕ್ಕೂ ಅನುಮತಿ ಪಡೆಯಬೇಕಾದ ಸ್ಥಿತಿ ಇತ್ತು. ಹಾಗಾಗಿ, ಉಳಿದೆಲ್ಲರಿಗಿಂತ ಅಕ್ಷರಶ: ಗೃಹಬಂಧನದಲ್ಲಿದ್ದವರು ಈ ಅತೃಪ್ತರೇ.
ಇವರಿದ್ದ ರೆಸಾರ್ಟ್‌ನಲ್ಲಿ ಯಾರನ್ನೂ ಒಳಗೆ ಬಿಡುವಂತಿಲ್ಲ. ತಾವೂ ಹೊರಗೆ ಬರಲು ಅನುಮತಿ ಪಡೆಯಬೇಕಾಗಿತ್ತು. ಈ ಮಧ್ಯೆ ಮತ್ತಿಬ್ಬರು ಶಾಸಕರು ಇದೇ ಗುಂಪು ಸೇರಿದ್ದರು. ಮತ್ತೂಂದೆಡೆ ಶಾಸಕ ಶ್ರೀಮಂತ ಪಾಟೀಲ್ ಎದೆ ನೋವಿನ ಹಿನ್ನೆಲೆಯಲ್ಲಿ ಮತ್ತದೇ ಮುಂಬೈನ ಆಸ್ಪತ್ರೆಗೆ ದಾಖಲಾಗಿ, ನಾಲ್ಕು ದಿನಗಳಿಂದ ಕಣ್ಗಾವಲಿನಲ್ಲಿದ್ದರು. ಇದರಿಂದ ಯಾವಾಗ “ಬಿಡುಗಡೆ ಭಾಗ್ಯ’ ಸಿಕ್ಕೀತು ಎಂದು ಎದುರು ನೋಡುತ್ತಿದ್ದರು.
ಕೆಲ ದಿನಗಳ ಮಟ್ಟಿಗೆ ಬಿಜೆಪಿ ಶಾಸಕರು ರಮಾಡ ಹೋಟೆಲ್‌ನಲ್ಲಿ, ಕಾಂಗ್ರೆಸ್ ಶಾಸಕರು ತಾಜ್ ವಿವಾಂತ ಮತ್ತು ಜೆಡಿಎಸ್ ಶಾಸಕರು ದೇವನಹಳ್ಳಿಯ ಪ್ರಸ್ಟೀಜ್ ಗಾಲ್ಫ್ಶೈರ್ ಹೋಟೆಲ್‌ನಲ್ಲಿದ್ದರು. ಇನ್ನು ಹತ್ತು ಜನ ಅತೃಪ್ತರಂತೂ ಆರಂಭದಿಂದಲೂ ಮುಂಬೈನ ರೆನೈಸನ್ಸ್ ಕನ್ವೆನ್ಶನ್ ಸೆಂಟರ್ ಹೋಟೆಲ್‌ನಲ್ಲಿ ಬೀಡು ಬಿಟ್ಟಿದ್ದರು. ಅಂತಿಮವಾಗಿ ಇವರೆಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
ತಾತ್ಕಾಲಿಕ ರಿಲೀಫ್: ಹೊಸ ಸರ್ಕಾರ ರಚನೆಯೊಂದಿಗೆ ಈ ಬಂಧನದಿಂದ ಶಾಶ್ವತ ಮುಕ್ತಿ ದೊರಕಿದಂತಾಗಿದೆಯೇ? ಉತ್ತರ- ಸದ್ಯಕ್ಕೆ ಇಲ್ಲ. ಈಗ ಸಿಕ್ಕಿರುವುದು ಕೇವಲ ತಾತ್ಕಾಲಿಕ ರಿಲೀಫ್. ಹೊಸ ಸರ್ಕಾರ ರಚನೆಗೆ ಮತ್ತೂಂದು ಸುತ್ತಿನ ಸರ್ಕಸ್ ನಡೆಯಲಿದೆ. ಅಷ್ಟೇ ಅಲ್ಲ, ಹೊರಗಡೆಯಿಂದ ಬಂದವರು ಮತ್ತು ಪಕ್ಷದಲ್ಲೇ ಇದ್ದವರ ನಡುವೆ ಯಾವುದೇ ಭಿನ್ನರಾಗ ಕೇಳಿ ಬರದಂತೆ ನೋಡಿಕೊಳ್ಳುವ ಸವಾಲು ಸರ್ಕಾರದ ಮೇಲೆ ಇರಲಿದೆ. ಅದೇ ರೀತಿ, ಮುನಿಸಿಕೊಂಡು ಹೊಗುವ ಸಾಧ್ಯತೆ ಇರುವುದರಿಂದ, ಅಂತವರ ಮೇಲೆ ಸದಾ ಕಣ್ಗಾವಲು ಇರುತ್ತದೆ. ಹಾಗಾಗಿ, ಸಂಪೂರ್ಣವಾಗಿ ನಿಟ್ಟುಸಿರು ಬಿಡುವಂತಿಲ್ಲ.
ನಿರಾಳ: ಶಾಸಕರೊಂದಿಗೆ ಅಧಿಕಾರಿಗಳು, ಮಾರ್ಷಲ್‌ಗಳು, ಪೊಲೀಸರು ಕೂಡ ನಿರಾಳರಾಗಿದ್ದಾರೆ. ವಿಶ್ವಾಸಮತ ಯಾಚನೆ ದಿನದಿಂದಲೂ ಸುದೀರ್ಘ ಚರ್ಚೆಯಲ್ಲಿ ಭಾಗವಹಿಸಿದ್ದ ವಿಧಾನಸಭಾ ಸದಸ್ಯರಿಗೆ ರಕ್ಷಣೆ ನೀಡುವುದು, ಅಗತ್ಯ ದಾಖಲೆಗಳನ್ನು ಪೂರೈಸುವುದರಲ್ಲಿ ಈ ಸಿಬ್ಬಂದಿ ಬ್ಯುಸಿಯಾಗಿತ್ತು. ಈಗ ಅವರೂ ನಿಟ್ಟುಸಿರು ಬಿಟ್ಟಿದ್ದಾರೆ.