ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಹು ನಿರೀಕ್ಷಿತ ಯೋಜನೆ ‘ಮುಖ್ಯಮಂತ್ರಿ ಕಿರಯೇದಾರ್ ಬಿಜಲಿ ಮೀಟರ್ ಯೋಜನಾ’ ಅಡಿಯಲ್ಲಿ ರಾಷ್ಟ್ರ ರಾಜಧಾನಿಯ ಸುಮಾರು 14.64 ಲಕ್ಷ ಕುಟುಂಬಗಳಿಗೆ ಸೆಪ್ಟಂಬರ್ ತಿಂಗಳಲ್ಲಿ ಶೂನ್ಯ ವಿದ್ಯುತ್ ಶುಲ್ಕ ಬಂದಿದೆ.
ಈ ಯೋಜನೆ ಅಡಿಯಲ್ಲಿ 201 ಯುನಿಟ್ ಗಳಿಂದ 400 ಯುನಿಟ್ ಗಳವರೆಗಿನ ವಿದ್ಯುತ್ ಬಳಕೆಯ ಶುಲ್ಕದ ಮೇಲೆ ಸರಕಾರವು 50 ಪ್ರತಿಶತ ಸಬ್ಸಿಡಿಯನ್ನು ಒದಗಿಸುತ್ತದೆ. ಮತ್ತು 200 ಯುನಿಟ್ ಗಳವರೆಗಿನ ವಿದ್ಯುತ್ ಬಳಕೆ ಉಚಿತವಾಗಿರುತ್ತದೆ. ಪ್ರಾರಂಭದಲ್ಲಿ ಈ ಯೋಜನೆಯ ಪ್ರಯೋಜನವನ್ನು ಸ್ವಂತ ಮನೆ ಹೊಂದಿರುವವರಿಗೆ ಮಾತ್ರವೇ ನೀಡಲಾಗಿತ್ತು ಆದರೆ ಆ ಬಳಿಕ ಇದನ್ನು ಬಾಡಿಗೆದಾರ ಕುಟುಂಬಗಳಿಗೂ ವಿಸ್ತರಿಸಲಾಗಿತ್ತು.
ನಗರದಲ್ಲಿರುವ ಒಟ್ಟು 52.27 ಲಕ್ಷ ಗೃಹೋಪಯೋಗಿ ವಿದ್ಯುತ್ ಗ್ರಾಹಕರಲ್ಲಿ ಸುಮಾರು 28 ಪ್ರತಿಶತ ಅಂದರೆ ಸುಮಾರು 14.64 ಲಕ್ಷ ಕುಟುಂಬಗಳಿಗೆ ಸೆಪ್ಟಂಬರ್ ತಿಂಗಳಲ್ಲಿ ಶೂನ್ಯ ವಿದ್ಯುತ್ ಶುಲ್ಕ ಬಂದಿದೆ ಎಂದು ಇಂಧನ ಇಲಾಖೆ ಬಿಡುಗಡೆಗೊಳಿಸಿರುವ ಮಾಹಿತಿ ತಿಳಿಸಿದೆ.
ದೆಹಲಿಗೆ ಮೂರು ಪ್ರಮುಖ ವಿದ್ಯುತ್ ಪೂರೈಕೆ ಕಂಪೆನಿಗಳು ವಿದ್ಯುತ್ ಸೌಲಭ್ಯವನ್ನು ಒದಗಿಸುತ್ತಿವೆ ಮತ್ತು ದಕ್ಷಿಣ ಮತ್ತು ಪಶ್ಚಿಮ ದೆಹಲಿಯ ನಿವಾಸಿಗಳು ಈ ಯೋಜನೆಯ ಗರಿಷ್ಠ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ಯೋಜನೆಯ ಕುರಿತಾಗಿ ಟ್ವೀಟ್ ಮೂಲಕ ಸಂತಸವನ್ನು ಹಂಚಿಕೊಂಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ‘ಈ ಯೋಜನೆಯಿಂದ ಗ್ರಾಹಕರಿಗೆ ವಿದ್ಯುತ್ ಶುಲ್ಕದಲ್ಲಿ ಉಳಿಕೆಯಾಗುವುದು ಮಾತ್ರವಲ್ಲದೇ ಮಿತ ವಿದ್ಯುತ್ ಬಳಕೆಯನ್ನು ಪ್ರೋತ್ಸಾಹಿಸುವಲ್ಲಿಯೂ ಈ ಯೋಜನೆ ಯಶಸ್ಸನ್ನು ಕಂಡಿದೆ. ಇದೀಗ ಪ್ರತೀ ಕುಟುಂಬಗಳು 200 ಯುನಿಟ್ ಗಳಿಗಿಂತ ಕಡಿಮೆ ವಿದ್ಯುತ್ ಅನ್ನು ಬಳಸಲು ಪ್ರಯತ್ನಿಸುತ್ತವೆ, ಹಾಗೆ ಮಾಡಿದ ಸಂದರ್ಭದಲ್ಲಿ ಕುಟುಂಬಗಳಿಗೆ ವಿದ್ಯುತ್ ಶುಲ್ಕದಲ್ಲಿ ಉಳಿತಾಯವಾಗುತ್ತದೆ ಮತ್ತು ಇನ್ನೊಂದು ಕಡೆಯಲ್ಲಿ ವಿದ್ಯುತ್ ಬಳಕೆಯಲ್ಲೂ ಮಿತವ್ಯಯ ಸಾಧಿಸಲು ಅನುಕೂಲವಾಗುತ್ತದೆ’ ಎಂದು ಕೇಜ್ರಿವಾಲ್ ಅವರು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.