Advertisement
ರಾ.ಹೆ. 66ರ ಪಂಪ್‌ವೆಲ್ ಜಂಕ್ಷನ್ ನಲ್ಲಿ ಮತ್ತು ರಾ.ಹೆ. 75ರ ಪಡೀಲ್ ರೈಲ್ವೇ ಅಂಡರ್ ಪಾಸ್‌ನಲ್ಲಿ ಹಾಗೂ ಕೊಟ್ಟಾರ ಚೌಕಿಯಲ್ಲಿ ಓವರ್ ಬ್ರಿಜ್ ಬಳಿ ರಸ್ತೆಗೆ ನೆರೆ ನೀರು ಬಿದ್ದ ಕಾರಣ ಮಂಗಳೂರು ನಗರ ಪ್ರವೇಶಿಸುವ ಮತ್ತು ನಗರದಿಂದ ಹೊರ ಹೋಗುವ ವಾಹನಗಳು ಸಂಚರಿಸಲಾಗದೆ ನಗರದ ಸಂಪರ್ಕ ಕಡಿತಗೊಂಡಿತ್ತು. ಬಸ್ ಮತ್ತು ಇತರ ವಾಹನಗಳಲ್ಲಿ ಹೊರಟವರು ಮುಂದಕ್ಕೆ ಹೋಗಲೂ ಆಗದೆ, ವಾಪಸ್ ಬರಲೂ ಆಗದೆ ಗಂಟೆ ಗಟ್ಟಲೆ ವಾಹನಗಳಲ್ಲಿ ಸಿಲುಕಿ ಪರದಾಡಬೇಕಾಯಿತು.
ಪಂಪ್‌ವೆಲ್ ಜಂಕ್ಷನ್‌ನಲ್ಲಿ ಓವರ್ ಬ್ರಿಜ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಹರಿದು ಹೋಗಲು ಸ್ಥಳಾವಕಾಶ ಇಲ್ಲದ ಕಾರಣ ರಸ್ತೆ ಮತ್ತು ಓವರ್ ಬ್ರಿಜ್‌ನ ರ್‍ಯಾಂಪ್ ನಿರ್ಮಾಣಕ್ಕಾಗಿ ಅಗೆದ ಜಾಗದಲ್ಲಿ ನೀರು ನಿಂತು ಸಂಪೂರ್ಣ ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
Related Articles
Advertisement
ಪಡೀಲ್ ರೈಲ್ವೇ ಅಂಡರ್ ಪಾಸ್ ಬಳಿ ರಸ್ತೆ ಮೇಲೆ ನೀರು ಬಿದ್ದ ಕಾರಣ ಸಂಚಾರ ಅಸ್ತವ್ಯಸ್ತಗೊಂಡು ಕಣ್ಣೂರು ಅಡ್ಯಾರ್ ತನಕವೂ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಕೊಟ್ಟಾರ ಚೌಕಿ ಜಂಕ್ಷನ್‌ನಲ್ಲಿ ರಸ್ತೆ ಮೇಲೆ ನೀರು ಬಿದ್ದ ಕಾರಣ ಉತ್ತರ ದಿಕ್ಕಿನಲ್ಲಿ ಕೂಳೂರು ತನಕ ಹಾಗೂ ದಕ್ಷಿಣ ಭಾಗದಲ್ಲಿ ಉರ್ವಸ್ಟೋರ್ ತನಕ ವಾಹನಗಳು ಕ್ಯೂನಲ್ಲಿ ನಿಂತಿದ್ದವು. ಬಸ್ ಸಂಚಾರ ಅಸ್ತವ್ಯಸ್ತಗೊಡಿದ್ದು, ಕೆಲವು ಸಿಟಿ ಬಸ್‌ನವರು ಅರ್ಧದಲ್ಲಿ ಟ್ರಿಪ್ ಕಟ್ ಮಾಡಿ ವಾಪಸಾದರು.
ಮಧ್ಯಾಹ್ನ 2 ಗಂಟೆ ತನಕವೂ ಪರಿಸ್ಥಿತಿ ಇದೇ ರೀತಿ ಇದ್ದು, ಕ್ರಮೇಣ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಲವು ಬಸ್‌ಗಳು ಓಡಾಟ ಪುನರಾರಂಭಿಸಿದವು.