Advertisement

‘ಮನಃಶಾಸ್ತ್ರ  –ಪತ್ರಿಕೋದ್ಯಮ ಅವಿನಾಭಾವ ಸಂಬಂಧ’

01:05 PM Aug 25, 2018 | |

ನೆಹರೂನಗರ : ಮನಃ ಶಾಸ್ತ್ರ ಹಾಗೂ ಪತ್ರಿಕೋದ್ಯಮದ ನಡುವೆ ಅವಿನಾಭಾವ ಸಂಬಂಧವಿದೆ. ಅನೇಕ ಸಂದರ್ಭಗಳಲ್ಲಿ ಪತ್ರಕರ್ತ ಜನರ ಮನಸ್ಸನ್ನು ಅರ್ಥೈಸಿಕೊಂಡು ಮುನ್ನಡೆ ಯುವುದು ಅನಿವಾರ್ಯ ಎಂದು ಉಡುಪಿಯ ಯೋಗದೀಪಿಕಾ ವಿದ್ಯಾಪೀಠದ ಪ್ರಾಧ್ಯಾಪಕ ಲಕ್ಷ್ಮೀಶ್‌ ಭಟ್‌ ಅಲುಂಬೆ ಹೇಳಿದರು. ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳು ಆಯೋಜಿಸುವ ಜನ-ಮನ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಪತ್ರಕರ್ತರಾಗುವವರು ಮನಃ ಶಾಸ್ತ್ರದ ಬಗೆಗೆ ತಿಳಿದುಕೊಳ್ಳಬೇಕಾದ್ದು ಅನಿವಾರ್ಯ. ಅನೇಕ ಸಂದರ್ಭಗಳಲ್ಲಿ ವಸ್ತು, ವಿಷಯ, ಜೀವಗಳನ್ನು ಕಳೆದುಕೊಂಡಿರುವ ವ್ಯಕ್ತಿಗಳ ಸಂಬಂಧಿಕರನ್ನು ಮಾತನಾಡಿಸುವ ಸಂದರ್ಭವೂ ಬರುತ್ತದೆ. ಮಾತನಾಡಿಕೊಂಡೇ ಸಾಂತ್ವನವನ್ನೂ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ಆಗ ಮನಃಶಾಸ್ತ್ರದ ಕುರಿತಾದ ಹಿಡಿತ ಉಪಯೋಗಕ್ಕೆ ಬರುತ್ತದೆ ಎಂದರು.

ಪತ್ರಕರ್ತರೆನಿಸಿಕೊಂಡವರು ಸಮಾಜಕ್ಕೆ ಬಾಧ್ಯಸ್ಥರು. ಅವರು ವಸ್ತು- ಸ್ಥಿತಿಯನ್ನು ಅರಿತುಕೊಂಡು ನಡೆಯಬೇಕಾದ ಆವಶ್ಯಕತೆಯಿದೆ. ಸಮಾಜದಲ್ಲಿ ಪ್ರಮುಖರೆನಿಸಿಕೊಂಡವರನ್ನು ಸಂದರ್ಶಿಸಿದರೆ ಸಾಲದು. ಜನಸಾಮಾನ್ಯರನ್ನೂ ಮಾತನಾಡಿ ಸುವುದು, ಅವರ ಭಾವನೆಗಳಿಗೂ ಅವಕಾಶ ಕಲ್ಪಿಸುವುದು ಮುಖ್ಯವೆನಿಸುತ್ತದೆ ಎಂದು ಹೇಳಿದರು. ವಿಭಾಗದ ಸಂಯೋಜಕ ರಾಕೇಶ್‌ ಕುಮಾರ್‌ ಕಮ್ಮಜೆ ಪ್ರಸ್ತಾವನೆಗೈದು ಜನ-ಮನ ಎನ್ನುವುದು ವಿಶೇಷ ಸರಣಿ ಕಾರ್ಯಕ್ರಮ. ಇದು ಜನಸಾಮಾನ್ಯರಿಂದ ತೊಡಗಿ ಎಲ್ಲ ವರ್ಗ, ಹಂತದ ಜನರ ಅನುಭವಕ್ಕೆ ವೇದಿಕೆಯಾಗಲಿದೆ. ಪತ್ರಿಕೋದ್ಯಮಕ್ಕೆ ಸಂಬಂಧಿಸದ ವಿಚಾರ ಯಾವುದೂ ಇಲ್ಲ. ಹಾಗಾಗಿ ಪತ್ರಿಕೋದ್ಯಮ ಅಧ್ಯಯನ ಸಂದರ್ಭದಲ್ಲೇ ಬೇರೆ ಬೇರೆ ಅನುಭವಗಳಿಗೆ ಕಿವಿಯಾಗುವ ದೃಷ್ಟಿಯಿಂದ ಈ ಸರಣಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಭಾಗದ ಉಪನ್ಯಾಸಕಿ ಭವ್ಯಾ ಪಿ. ಆರ್‌.ನಿಡ್ಪಳ್ಳಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಅಕ್ಷಯ್‌ ಕುಮಾರ್‌ ಪಲ್ಲಮಜಲು ಸ್ವಾಗತಿಸಿ, ರಾಕೇಶ್‌ ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು. ಅಕ್ಷಿತ್‌ ಜೋಗಿ ವಂದಿಸಿದರು. 

ಮಾಹಿತಿ ಪಡೆಯಿರಿ
ಪತ್ರಿಕೋದ್ಯಮ ಎನ್ನುವುದು ಜವಬ್ದಾರಿಯುತ ವರ್ತನೆಯನ್ನು ಬಯಸುವ ಕ್ಷೇತ್ರ. ಪತ್ರಕರ್ತ ಅರಿವಿಲ್ಲದೇ ಮಾಡುವ ಒಂದು ತಪ್ಪಿನಿಂದ ಸಮಾಜದಲ್ಲಿ ದೊಡ್ಡ ಪ್ರಮಾದವೇ ಉಂಟಾಗಬಹುದು. ಸರಿಯಾದ ಮಾಹಿತಿಯನ್ನು ಪಡೆದು ಸುದ್ದಿ ಮಾಡುವುದು ಅತೀ ಅಗತ್ಯ ಎಂದು ಲಕ್ಷ್ಮೀಶ ಭಟ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next