ನ್ಯೂಯಾರ್ಕ್: ಅಮೆರಿಕ ಮಾಜಿ ಅಧ್ಯಕ್ಷ, ಡೆಮಾಕ್ರಾಟ್ ಪಕ್ಷದ ಮಾಜಿ ನಾಯಕ ಬಿಲ್ ಕ್ಲಿಂಟನ್ ಈ ಇಳೀ ವಯಸ್ಸಿನಲ್ಲಿ ಆರೋಪವೊಂದಕ್ಕೆ ತುತ್ತಾಗಿದ್ದಾರೆ. ಕುಖ್ಯಾತ ಜೆಫ್ರಿ ಎಪ್‌ಸ್ಟೀನ್- ಸ್‌ಲೇನ್ ಮ್ಯಾಕ್ಸ್‌ವೆಲ್ ವೇಶ್ಯಾವಾಟಿಕೆ ಪ್ರಕರಣದಲ್ಲಿ, ಕ್ಲಿಂಟನ್ ಹೆಸರೂ ನಮೂದಾಗಿದೆ. ಕ್ಲಿಂಟನ್ ಹದಿಹರೆಯದ “ಹೆಣ್ಣುಮಕ್ಕಳನ್ನು ಇಷ್ಟಪಡುತ್ತಿದ್ದರು’ ಎಂಬ ಎಪ್‌ಸ್ಟೀನ್ ಹೇಳಿಕೆ ಈಗ ದೊಡ್ಡ ಸದ್ದು ಮಾಡಿದೆ.
ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲಾ ನ್ಯಾಯಾಲಯವೊಂದರ ಬಳಿ ಮುಚ್ಚಿದ ಲಕೋಟೆಯಲ್ಲಿದ್ದ 1000 ಪುಟಗಳ ದಾಖಲೆಗಳು ಈಗ ಬಹಿರಂಗಗೊಂಡಿದೆ. ಅದರಲ್ಲಿ ಮೇಲಿನ ಆರೋಪವಿದೆ. ಹಗರಣದಲ್ಲಿ ಶಿಕ್ಷೆಗೊಳಗಾಗಿದ್ದ ಎಪ್‌ಸ್ಟೀನ್ 2019ರಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ, 76 ವರ್ಷದ ಕ್ಲಿಂಟನ್‌ಗೆ ಇದರಿಂದ ಸಮಸ್ಯೆಯಾಗುವ ಸಾಧ್ಯತೆಯೇನಿಲ್ಲ.
ಯಾರ್ಯಾರ ಬಗ್ಗೆ ಉಲ್ಲೇಖ?:
ರಿಪಬ್ಲಿಕನ್ ನಾಯಕ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಶ್ವವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಹೆಸರೂ ತೆರೆಯಲ್ಪಟ್ಟಿರುವ ದಾಖಲೆಗಳಲ್ಲಿದೆ. ಲೈಂಗಿಕ ದಂಧೆ ನಡೆಸಲು ಅಕ್ರಮವಾಗಿ ಹೆಣ್ಣುಮಕ್ಕಳ ಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ ಜೆಫ್ರಿ ಎಪ್‌ಸ್ಟೀನ್ ಪಾಲ್ಗೊಂಡಿದ್ದ. ಈತನ ವಿಮಾನದಲ್ಲಿ ಬಿಲ್‌ಕ್ಲಿಂಟನ್ ಪದೇ ಪದೆ ಪ್ರಯಾಣಿಸುತ್ತಿದ್ದರು, ಅವನೊಂದಿಗೆ ಆಗಾಗ ಊಟ ಮಾಡಿದ್ದರು ಎಂಬ ಉಲ್ಲೇಖಗಳೂ ಇವೆ.
ಯಾರು ಎಪ್‌ಸ್ಟೀನ್?:
ಎಪ್‌ಸ್ಟೀನ್ ಅಮೆರಿಕ ಮತ್ತು ವಿದೇಶಗಳಲ್ಲಿ ಹಣಕಾಸು ಸೇವೆ ಒದಗಿಸುತ್ತಿದ್ದ ಖ್ಯಾತನಾಮ ವ್ಯಕ್ತಿ. ಆತ ಸ್‌ಲೇನ್ ಮ್ಯಾಕ್ಸ್‌ವೆಲ್ ಜೊತೆ ಪ್ರಣಯ ಸಂಬಂಧ ಹೊಂದಿದ್ದ. ಅದು 1990ರ ಹೊತ್ತಿಗೆ ಲೈಂಗಿಕ ದಂಧೆಯಾಗಿ ಬದಲಾಗಿತ್ತು. ವೇಶ್ಯಾವಾಟಿಕೆ ಮತ್ತು ಹೆಣ್ಣುಮಕ್ಕಳ ಸಾಗಣೆ ಪ್ರಕರಣದಲ್ಲಿ ಆತನಿಗೆ ಶಿಕ್ಷೆಯಾಗಿತ್ತು.