ಮುಂಬಯಿ: ಮುಂಬಯಿ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ನಿರ್ಮಾಣದ ಮೆಟ್ರೋ-2 ಎ ಮತ್ತು ಮೆಟ್ರೋ-7 ಮಾರ್ಗಗಳ ಬಹುನಿರೀಕ್ಷಿತ ಪ್ರಾಯೋಗಿಕ ಪರೀಕ್ಷೆ ಮೇ ಕೊನೆಯ ವಾರದಲ್ಲಿ ನಡೆಯಲಿದೆ.
ಈ ಪರೀಕ್ಷೆಯನ್ನು ಎಂಎಂಆರ್‌ಡಿಎ ಸಿದ್ಧಪಡಿಸಿದ್ದು, ಆರಂಭದಲ್ಲಿ ಆರೇಯಿಂದ ಕಾಮರಾಜ್ ನಗರಕ್ಕೆ 20 ಕಿ. ಮೀ. ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಎಂಎಂಆರ್‌ಡಿಎ ಕಳೆದ ವರ್ಷದ ಗುರಿಯ ಪ್ರಕಾರ ದಹಿಸರ್‌ನಿಂದ ಡೀನ್ ನಗರದವರೆಗಿನ ಮೆಟ್ರೋ-2 ಎ ಮತ್ತು ದಹಿಸರ್ ಪೂರ್ವದಿಂದ ಅಂಧೇರಿ ಪೂರ್ವದವರೆಗಿನ ಮೆಟ್ರೋ- 7 ಪರೀಕ್ಷೆಗಳನ್ನು ಜನವರಿಯಲ್ಲಿ ನಿಗದಿಪಡಿ ಸಲಾಗಿತ್ತು.
ಬಳಿಕ ಮೆಟ್ರೋವನ್ನು ಎಪ್ರಿಲ್‌ನಲ್ಲಿ ಪ್ರಾರಂಭಿಸಲು ಯೋಜಿಸಲಾಗಿತ್ತು. ಆದರೆ ಲಾಕ್‌ಡೌನ್ ನಿಂದಾಗಿ ಯೋಜನೆ ಸ್ಥಗಿತಗೊಂಡು ಜಪಾನ್ ನಿಂದ ಪ್ರಮುಖ ಅಂಶ ಆಮದು ಮಾಡಿ ಕೊಳ್ಳುವಲ್ಲಿ ವಿಳಂಬವಾಯಿತು. ಪರಿಣಾಮವಾಗಿ ಮೆಟ್ರೋ ನಿರ್ಮಾಣ ಸ್ಥಗಿತಗೊಂಡಿತು.ಮುಂಬಯಿಗೆ ಮೆಟ್ರೋ ಆಗಮನ ವಿಳಂಬ ವಾದ ಕಾರಣ ಮೆಟ್ರೊ ಪರೀಕ್ಷೆ ವಿಳಂಬವಾಗಿದೆ. ಪ್ರಸ್ತುತ ಆರು ಕೋಚ್ ಅನ್ನು ಹೊಂದಿರುವ ಮೆಟ್ರೋ ರೈಲು ಮುಂಬಯಿಗೆ ಬಂದಿದೆ. ಈ ಮಾದರಿ ರೈಲು ಚಾರ್ಕೋಪ್ ನಿಲ್ದಾಣದಲ್ಲಿ ಪರೀಕ್ಷೆಗೆ ಸಿದ್ಧವಾಗುತ್ತಿದೆ.
ಚಾರ್ಕೋಪ್ ಡಿಪೋ ಬಳಿಯ ಕಾಮರಾಜ್ ನಗರ ಮತ್ತು ಆರೆ ನಡುವೆ 20 ಕಿ. ಮೀ. ದೂರದಲ್ಲಿ ಪರೀಕ್ಷೆ ನಡೆಯಲಿದೆ. ಈ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಪ್ರದೇಶದ ಕೆಲವು ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಅದು ಪೂರ್ಣಗೊಂಡ ಕೂಡಲೇ ಮುಂದಿನ ಮಾರ್ಗವನ್ನು ಎಂಎಂಆರ್‌ಡಿಎ ಪರೀಕ್ಷಿಸಲಿದೆ.ಈ ಮಧ್ಯೆ ಎಂಎಂಆರ್‌ಡಿಎ ಈ ವರ್ಷದ ಅಂತ್ಯದ ವೇಳೆಗೆ ಮೆಟ್ರೋ – 2 ಎ ಮತ್ತು ಮೆಟ್ರೋ – 7 ಅನ್ನು ಲೋಕಾರ್ಪಣೆಗೆ ಯೋಜಿಸುತ್ತಿದೆ.
ಈ ನಿಟ್ಟಿನಲ್ಲಿ ಎಂಎಂಆರ್‌ಡಿಎ ಕ್ರಮ ಕೈಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾದರಿ ರೈಲು ಪರೀಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ರೈಲ್ವೇ ಸುರಕ್ಷಾ ಆಯುಕ್ತರಿಗೆ ಅನುಮೋದನೆಗಾಗಿ ಕಳುಹಿಸಲಾಗುತ್ತದೆ. ಮೆಟ್ರೋ ನಿಲ್ದಾಣಗಳ ಸಿಗ್ನಲಿಂಗ್ ವ್ಯವಸ್ಥೆಯ ಕೆಲಸವನ್ನು ಎಂಎಂಆರ್‌ಡಿಎ ಸಂಪೂರ್ಣವಾಗಿ ಪೂರ್ಣಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.