Advertisement
“ಇಂಡಸ್ಟ್ರಿಯಲ್ಲಿ ನಾವೇನೂ ಸಾಧನೆ ಮಾಡಿಲ್ಲ. ಇನ್ನು ಗ್ರ್ಯಾಂಡ್ಆಗಬೇಕು, ಬ್ರಾಂಡ್ ಆಗಬೇಕು ಅದಕ್ಕೆಲ್ಲಾ ಟೈಮ್ ಬೇಕು. ನಮ್ಮ ಉದ್ದೇಶವೊಂದೇ. ಒಳ್ಳೆಯ ಸಿನಿಮಾ ಮಾಡಬೇಕು….’ – ನಿರ್ದೇಶಕ ನಂದಕಿಶೋರ್ ಸುಧೀರ್ ಹೀಗೆ ನೇರವಾಗಿಯೇ ಹೇಳುತ್ತಾ ಹೋದರು.
ಧ್ರುವಸರ್ಜಾ ಅಭಿನಯದ “ಪೊಗರು’ ಬಹು ನಿರೀಕ್ಷೆಯ ಚಿತ್ರ.
ನಂದಕಿಶೋರ್ ಹೇಳಿದ್ದು ಹೀಗೆ. “ಸದ್ಯಕ್ಕಿನ್ನೂ ಚಿತ್ರೀಕರಣ ನಡೆಯುತ್ತಿದೆ. ಇನ್ನು 20 ದಿನಗಳ ಚಿತ್ರೀಕರಣ ನಡೆದರೆ, ಕುಂಬಳಕಾಯಿ. “ಪೊಗರು’ ನನ್ನ ಹಾಗೂ ತಂಡದ ದೊಡ್ಡ ಕನಸು. ನಾನು ಸಕ್ಸಸ್, ಫೇಲ್ಯೂರ್ ಎಲ್ಲವನ್ನೂ ನೋಡಿದ್ದೇನೆ. ಈ ರಂಗದಲ್ಲಿ ಆಡಿಯನ್ಸ್‌ಗೆ ಎಷ್ಟು ತೃಪ್ತಿ
ಪಡಿಸ್ತೀವಿ ಅನ್ನೊದಷ್ಟೇ ಮುಖ್ಯವಾಗುತ್ತೆ ಹೊರತು, ಅಲ್ಲಿ ನಾಯಕ ಯಾರು, ನಿರ್ದೇಶಕ ಯಾರೆಂಬುದು ಮುಖ್ಯ ಆಗಲ್ಲ. ಕಂಟೆಂಟ್ ಸ್ಟ್ರಾಂಗ್ ಆಗಿದ್ದರೆ ಮಾತ್ರ ಅದು ರೀಚ್ ಆಗುತ್ತೆ. ಇನ್ನು, “ಪೊಗರು’ ಒಂದೂವರೆ
ವರ್ಷ ಆಯ್ತು, ತುಂಬಾ ಲೇಟ್ ಆಗ್ತಾ ಇದೆ ಎಂಬ ಮಾತಿದೆ. ಅದನ್ನು ಒಪ್ಪುತ್ತೇನೆ. ನಿಜ ಹೇಳುವುದಾದರೆ, ಈ ಚಿತ್ರದ ಕಥೆ, ಪಾತ್ರ ಆ ರೀತಿ ಇದೆ. ನಿರೂಪಣೆ ಗಟ್ಟಿಗೊಳಿಸಬೇಕೆಂಬ ಉದ್ದೇಶ ಈ ಚಿತ್ರದ್ದು. ಹಾಗಾಗಿ
ಹೀರೋ ಪಾತ್ರಕ್ಕೆ ಸಮಯ ಬೇಕಾಯ್ತು. ಸಿನಿಮಾ ಸ್ವಲ್ಪ ಲೇಟ್ ಆಗಿದ್ದರೂ, ಸ್ಕ್ರೀನ್ ಮೇಲೆ ನೋಡಿದಾಗ, ತೃಪ್ತಭಾವ ಅಂತೂ ಇರುತ್ತೆ’ ಎಂಬುದು ನಂದಕಿಶೋರ್ ಮಾತು.
ಮುದ್ದು ಹುಡುಗನ ರಗಡ್ ಲುಕ್
ಸಾಮಾನ್ಯವಾಗಿ ಸಕ್ಸಸ್‌ಫುಲ್ ಹೀರೋ, ನಿರ್ದೇಶಕ ಸೇರಿಕೊಂಡಾಗ, ಅಲ್ಲಿ ಇನ್ನಷ್ಟು ನಿರೀಕ್ಷೆ ಹೆಚ್ಚಿರುತ್ತೆ. ಅಂಥದ್ದೊಂದು ಒತ್ತಡ, ಸವಾಲು ನಿರ್ದೇಶಕರಿಗೂ ಇತ್ತಾ? ಇದಕ್ಕೆ ನಂದಕಿಶೋರ್ ಹೇಳಿದ್ದು ಹೀಗೆ. ‘ಖಂಡಿತ ಇದು ದೊಡ್ಡ ಚಾಲೆಂಜ್. ಅದಾಗಲೇ ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ಸಿನಿಮಾ ಕೊಟ್ಟಿರುವ ಹೀರೋ ಸಿನಿಮಾ ಮಾಡಲು ಹೊರಟಾಗ, ಅದೊಂದು ದೊಡ್ಡ ಸವಾಲು. ಯಾಕೆಂದರೆ, ನಿರೀಕ್ಷೆ ಹೆಚ್ಚಿರುತ್ತೆ. ಯಾವ ಕಥೆ ಮಾಡಬೇಕು, ಹೇಗೆ ತೋರಿಸಬೇಕು, ಹಿಂದಿನ ಚಿತ್ರಗಳಿಗಿಂತಲೂ ಭಿನ್ನವಾಗಿ ತೋರಿಸುವುದು ಹೇಗೆ, ಹಾಡು ಹೇಗೆ ಮಾಡಿಸಬೇಕು, ವಿಷ್ಯುಯಲ್ ಪ್ಲಾನ್ ಹೆಂಗಿರಬೇಕು, ಗೆಟಪ್ ಯಾವ ರೀತಿ ಇರಬೇಕು ಎಂಬ ಲೆಕ್ಕಾಚಾರ ಹಾಕಿ ಈ ಚಿತ್ರ ಕೈಗೆತ್ತಿಕೊಂಡೆ. ಮೂರು ಚಿತ್ರಗಳಲ್ಲೂ ತುಂಬಾ ಮುದ್ದಾಗಿ ಕಾಣಿಸಿಕೊಂಡಿರುವ ಧ್ರುವಸರ್ಜಾ, ಇಲ್ಲಿ ಔಟ್ ಅಂಡ್ ಔಟ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನರು ಆ ರಗಡ್ ಲುಕ್ ಅನ್ನು ಸ್ವೀಕರಿಸುತ್ತಾರಾ, ಇಲ್ಲವಾ ಎಂಬ ಪ್ರಶ್ನೆಗಳೊಂದಿಗೇ ಮುಂದುವರೆದೆ. ವಿಶ್ವಾಸವಿತ್ತು. ಅದು ವರ್ಕೌಟ್ ಆಗುತ್ತಿದೆ’ ಎನ್ನುತ್ತಾರೆ ನಿರ್ದೇಶಕರು.
ಫಾರಿನ್ ಫೈಟರ್ನ ಇಂಡಿಯಾ ಪ್ರೀತಿ
ಜಗತ್ತಿನ ಅತ್ಯಂತ ಜನಪ್ರಿಯ ವ್ಯಕ್ತಿಗಳನ್ನು ಕರೆಸಿದ್ದು ದುಬಾರಿ ಎನಿಸಲಿಲ್ಲವೇ? ಈ ಪ್ರಶ್ನೆಗೆ ನಿರ್ದೇಶಕರು ಹೇಳಿದ್ದು ಹೀಗೆ. ‘ನಿರ್ಮಾಪಕರ ದೊಡ್ಡ ಮನಸು ಮತ್ತು ಸಿನಿಮಾ ಮೇಲಿನ ಪ್ರೀತಿ ಇದಕ್ಕೆ ಕಾರಣ. ಇದೇ ಮೊದಲ ಸಲ ಮೋರ್ಗನ್ ಆಸ್ಟೆ, ಕೈಗ್ರೀನ್, ಜಾನ್ ಲುಕಾಸ್ ಹಾಗು ಜೋ ಲಿಂಡರ್ ಅವರು ಒಟ್ಟಿಗೆ ಇಂಡಿಯನ್ ಸಿನಿಮಾದಲ್ಲಿ ನಟಿಸಿದ್ದಾರೆ. ಅದರಲ್ಲೂ ಕನ್ನಡದ ‘ಪೊಗರು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಹೆಮ್ಮೆ. ಇವರೆಲ್ಲ ಅತ್ಯಂತ ಜನಪ್ರಿಯ ವ್ಯಕ್ತಿಗಳಾದರೂ, ಸಿಂಪಲ್ ಆಗಿಯೇ ಸೆಟ್‌ನಲ್ಲಿದ್ದರು. ನಮಗೆ ಇದೇ ಬೇಕು, ಅದೇ ಆಗಬೇಕು ಎಂಬ ಡಿಮ್ಯಾಂಡ್ ಇಲ್ಲದೆ, ಕುರ್ಚಿ, ಛತ್ರಿ ಯಾವುದನ್ನೂ ಕೇಳದೆ, ಬೆಳಗ್ಗೆ 6 ಕ್ಕೆ ಶೂಟಿಂಗ್ ಅಂದರೆ, 5.30 ಕ್ಕೆ ಸೆಟ್‌ನಲ್ಲಿ ಇರುವಂತಹ ಬದ್ಧತೆಯ ವ್ಯಕ್ತಿಗಳಾದವರು. ಅದರಲ್ಲೂ ಇವರಿಗೆ ಇಂಡಿಯಾ ಅಂದರೆ ಪ್ರೀತಿ. ಮಾತು ಮಾತಿನಲ್ಲೇ ಇಂಡಿಯಾವನ್ನು ಹೊಗಳುತ್ತಾರೆ. ಹೀಗೆ ಒಬ್ಬೊಬ್ಬರನ್ನು ಆಯ್ಕೆ ಮಾಡಿ, ಅವರನ್ನು ಅಣಿಗೊಳಿಸಿದ್ದು ಸಾರ್ಥಕದ ಕ್ಷಣ ಎನಿಸಿತು. ಅವರಿಗೆ ನಟನೆ ಬಗ್ಗೆ ಅಷ್ಟೊಂದು ಐಡಿಯಾ ಇಲ್ಲ. ಅಂತಹವರನ್ನು ರೆಡಿಮಾಡಿ, ಸ್ಕ್ರೀನ್‌ಮೇಲೆ ಅಬ್ಬರಿಸುವಂತೆ ಮಾಡಿದ್ದು ‘ಪೊಗರು’ ತಂಡದ ಹೆಮ್ಮೆ’.
ಪ್ಯಾನ್ ಇಂಡಿಯಾ ಪ್ರಯತ್ನ
ಎಲ್ಲಾ ಸರಿ, ‘ಪೊಗರು’ ಕಥೆ ಏನು? ಅದನ್ನು ಚಿತ್ರದಲ್ಲೇ ನೋಡಬೇಕು ಎನ್ನುವ ಅವರು, ‘ಇದೊಂದು ತಾಯಿ ಮಗನ ನಡುವಿನ ಕಥೆ. ಪವಿತ್ರಾ ಲೋಕೇಶ್ ಅವರು ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ನಮ್ಮತನ ಇಲ್ಲಿ ಹೇರಳವಾಗಿದೆ. ಪ್ರತಿ 15 ನಿಮಿಷಕ್ಕೂ ಹೊಸ ಎಪಿಸೋಡ್ ಕಾಣಬಹುದು. ಇಲ್ಲಿ ಹಲವು ಸರ್‌ಪ್ರೈಸ್ ಇವೆ. ನಮ್ಮ ಹೀರೋ ಹೊಸ ಪ್ರಯತ್ನ ಮಾಡಿದ್ದಾರೆ. ಹಿಂದೆ ದೊಡ್ಡ ಸ್ಟಾರ್ ನಟರು ಆ ಪ್ರಯತ್ನ ಮಾಡಿದ್ದು ಬಿಟ್ಟರೆ, ಧ್ರುವ ಸರ್ಜಾ ಇಲ್ಲಿ ಆ ಪ್ರಯತ್ನ ಮಾಡಿದ್ದಾರೆ. ಅದೇನು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಇಷ್ಟು ದಿನ ಕಂಡ ಧ್ರುವ ಇಲ್ಲಿ ಬೇರೆ ರೀತಿ ಕಾಣುತ್ತಾರೆ ಎಂದು ಹೇಳುವ ನಂದಕಿಶೋರ್, ಇದು ಪ್ಯಾನ್ ಇಂಡಿಯಾ ಅಂತ ಹೇಳಲ್ಲ. ಕನ್ನಡ ಸಿನಿಮಾ ಮಾಡಿದ್ದೇವೆ. ಸಿನಿಮಾದ ಕೆಲ ತುಣುಕು ನೋಡಿದ ಬೇರೆಯವರು, ಎಲ್ಲೆಡೆ ಸಲ್ಲುವ ಚಿತ್ರವಿದು ಅಂದಾಗ, ನಿರ್ಮಾಣ ಸಂಸ್ಥೆ ಆ ನಿಟ್ಟಿನಲ್ಲಿ ಯೋಚಿಸುತ್ತಿದೆ. ಹೀರೋಗೆ ಒಂದು ಆಸೆ ಇದೆ, ಕನ್ನಡ ಭಾಷೆಯಲ್ಲೇ ಬೇರೆ ಭಾಷೆಗೂ ತಲುಪಬೇಕು ಅನ್ನೋದು. ಆ ಕುರಿತು ಚರ್ಚೆಯೂ ಆಗುತ್ತಿದೆ. ಇದರೊಂದಿಗೆ ಇಂಟರ್‌ನ್ಯಾಷನಲ್ ಲಾಂಗ್ವೇಜ್‌ನಲ್ಲೂ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆಲ್ಲ ಏನೇನು ತಯಾರಿ ಬೇಕು ಎಂಬುದು ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಡಿಸೆಂಬರ್ 25 ಕ್ಕೆ ‘ಪೊಗರು’ ಬಿಡುಗಡೆಯಾಗಲಿದೆ’ ಎನ್ನುತ್ತಾರೆ ನಂದಕಿಶೋರ್.
ವಿಜಯ್ ಭರಮಸಾಗರ